ADVERTISEMENT

ಅರಳೀಕಟ್ಟೆಹುಂಡಿಗೆ ಇನ್ನೂ ಸಿಗದ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 6:38 IST
Last Updated 12 ಜನವರಿ 2018, 6:38 IST
ನಂಜನಗೂಡು ತಾಲ್ಲೂಕಿನ ಅರಳೀಕಟ್ಟೆಹುಂಡಿಯಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ಕಾಮಗಾರಿ
ನಂಜನಗೂಡು ತಾಲ್ಲೂಕಿನ ಅರಳೀಕಟ್ಟೆಹುಂಡಿಯಲ್ಲಿ ಕೈಗೆತ್ತಿಕೊಂಡಿರುವ ಚರಂಡಿ ಕಾಮಗಾರಿ   

ನಂಜನಗೂಡು: ಪಾಳುಬಿದ್ದಿರುವ ಅರಳೀಕಟ್ಟೆಹುಂಡಿಗೆ ಜಿಲ್ಲಾಡಳಿತವು ಕಾಯಕಲ್ಪ ಕಲ್ಪಿಸುವ ಭರವಸೆ ನೀಡಿ ಆರು ತಿಂಗಳು ಕಳೆದರೂ ಗ್ರಾಮ ಅಭಿವೃದ್ಧಿ ಕಂಡಿಲ್ಲ. ಗುಳೆ ಹೋಗಿರುವ ಜನರು ಮರಳಿ ಬಂದಿಲ್ಲ.

ಬರಗಾಲ, ನೀರಿನ ತತ್ವಾರ, ಸೌಕರ್ಯಗಳ ಕೊರತೆಯಿಂದಾಗಿ ಹಲವು ವರ್ಷಗಳ ಹಿಂದೆಯೇ ಗ್ರಾಮಸ್ಥರು ಸಾಮೂಹಿಕವಾಗಿ ಗುಳೆ ಹೋಗಿ ಮೈಸೂರು ನಗರ, ಇತರೆಡೆ ವ್ಯಾಪಾರ, ಉದ್ಯೋಗದಲ್ಲಿ ತೊಡಗಿದ್ದಾರೆ.

ವಲಸೆ ಹೋದವರನ್ನು ಮರಳಿ ಕರೆತರಲು ಆಶ್ರಯ ಮನೆ ನಿರ್ಮಿಸಿಕೊಡುವ, ಪಿಂಚಣಿ ಸೌಲಭ್ಯ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಒದಗಿಸುವ ಭರವಸೆಯನ್ನು ನೀಡಲಾಗಿತ್ತು.

ADVERTISEMENT

ಊರು ತೊರೆದು ವರ್ಷಗಳೇ ಆಗಿರುವುದರಿಂದ ಮನೆಗಳು ಕುಸಿದಿವೆ, ಜಮೀನು ಪಾಳುಬಿದ್ದಿವೆ. ಸದ್ಯಕ್ಕೆ ಒಂದು ಕುಟುಂಬ ಮಾತ್ರ ಇಲ್ಲಿ ನೆಲೆಸಿದೆ. ಕೆಲ ದಿನಗಳ ಹಿಂದೆಯಷ್ಟೇ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ತಾಲ್ಲೂಕಿನ ದೊಡ್ಡಕವಲಂದೆ ಹೋಬಳಿ ವ್ಯಾಪ್ತಿಯಲ್ಲಿರುವ ಈ ಗ್ರಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.

‘ಗ್ರಾಮಕ್ಕೆ ಕರೆತರಲು ಪ್ರಯತ್ನ ನಡೆಸಲಾಗುತ್ತಿದೆ. ಆಶ್ರಯ ಯೋಜನೆಯಡಿ 100 ಮನೆ ನಿರ್ಮಿಸಿಕೊಳ್ಳಲು ಧನ ಸಹಾಯ ನೀಡಲಾಗುವುದು. ದಾಖಲೆ ನೀಡಿದರೆ ಕಂದಾಯ ಅದಾಲತ್‌ ನಡೆಸಿ ಜಮೀನುಗಳಿಗೆ ಖಾತೆ ಮಾಡಿಸಲಾಗುವುದು’ ಎಂದು ತಹಶೀಲ್ದಾರ್‌ ಎಂ.ದಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಅರಳೀಕಟ್ಟೆಹುಂಡಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಶಾಲೆ, ಸಮುದಾಯ ಭವನ ನಿರ್ಮಿಸಿ ಕೊಡಲಾಗುವುದು
ಎಂ.ದಯಾನಂದ ತಹಶೀಲ್ದಾರ್‌, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.