ADVERTISEMENT

ಪೊಲೀಸ್ ಭದ್ರತೆಯಲ್ಲಿ ಊಟ ವಿತರಣೆ

ಇಂದಿರಾ ಕ್ಯಾಂಟೀನ್‌ಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 6:09 IST
Last Updated 14 ಜನವರಿ 2018, 6:09 IST
ಮೈಸೂರಿನ ಕಾಡಾ ಕಚೇರಿ ಆವರಣದ ಕ್ಯಾಂಟೀನ್‌ ಎದುರು ಶನಿವಾರ ಮಧ್ಯಾಹ್ನ ಊಟಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಜನರು
ಮೈಸೂರಿನ ಕಾಡಾ ಕಚೇರಿ ಆವರಣದ ಕ್ಯಾಂಟೀನ್‌ ಎದುರು ಶನಿವಾರ ಮಧ್ಯಾಹ್ನ ಊಟಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಜನರು   

ಮೈಸೂರು: ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸಲು ಸರ್ಕಾರ ಆರಂಭಿಸಿದ ‘ಇಂದಿರಾ ಕ್ಯಾಂಟೀನ್‌’ಗೆ ನಿರೀಕ್ಷೆ ಮೀರಿ ಗ್ರಾಹಕರು ಬಂದಿದ್ದರಿಂದ ಶನಿವಾರ ಬೆಳಗಿನ ಉಪಾಹಾರ ಅರ್ಧ ಗಂಟೆಯಲ್ಲಿ ಖಾಲಿಯಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಕಾಡಾ’ ಕಚೇರಿ ಹಾಗೂ ಕೆ.ಆರ್‌.ಆಸ್ಪತ್ರೆಯ ಆವರಣದ ಕ್ಯಾಂಟೀನಿನಲ್ಲಿ ಮಧ್ಯಾಹ್ನದ ಊಟವನ್ನು ಪೊಲೀಸರ ಭದ್ರತೆಯಲ್ಲಿ ವಿತರಿಸಲಾಯಿತು. ಉಳಿದ 9 ಭಾಗಗಳಲ್ಲಿ ಯಾವುದೇ ಗೊಂದಲವಿಲ್ಲದೇ ಕ್ಯಾಂಟೀನ್‌ ನಡೆದವು.

ಬೆಳಿಗ್ಗೆ 7.30ಕ್ಕೆ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿದವು. ಕಾಡಾ ಕಚೇರಿ ಆವರಣದಲ್ಲಿ ಅದಾಗಲೇ ಅನೇಕರು ಸರತಿಯಲ್ಲಿ ನಿಂತಿದ್ದರು. ಮೊದಲು ಬಂದವರಿಗೆ ಇಡ್ಲಿ ಹಾಗೂ ವಾಂಗಿಬಾತ್‌ ನೀಡಲಾಯಿತು. ಅರ್ಧ ಗಂಟೆ ಕಳೆಯುತ್ತಿದ್ದಂತೆ ಉಪಾಹಾರವೆಲ್ಲವೂ ಖಾಲಿಯಾಯಿತು. 8 ಗಂಟೆಯ ಬಳಿಕ ಬಂದ ಬಹುತೇಕರಿಗೆ ಲಭ್ಯವಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬರುವ ಎಲ್ಲರಿಗೂ ಊಟ–ಉಪಾಹಾರದ ವ್ಯವಸ್ಥೆ ಇದೆ ಎಂದು ಸರ್ಕಾರ ಹೇಳಿದೆ. ಅಲ್ಪಪ್ರಮಾಣದಲ್ಲಿ ಉಪಾಹಾರ ನೀಡಿ ವಂಚನೆ ಮಾಡಲಾಗುತ್ತಿದೆ. ಅಡುಗೆ ಖಾಲಿಯಾಗಿದ್ದರೆ ಮತ್ತೆ ತಯಾರಿಸಿ ಬಡಿಸಬೇಕು’ ಎಂದು ಪಟ್ಟು ಹಿಡಿದರು.

‘ವಿಧಾನಸಭಾ ಚುನಾವಣೆ ಸಮೀಪ ಬರುತ್ತಿರುವುದರಿಂದ ಕ್ಯಾಂಟೀನ್‌ ಹೆಸರಿನಲ್ಲಿ ಸರ್ಕಾರ ನಾಟಕ ಮಾಡುತ್ತಿದೆ. ಬರುವ ಎಲ್ಲರಿಗೂ ಆಹಾರ ನೀಡಬೇಕು’ ಎಂದು ಆಗ್ರಹಿಸಿದರು. ಇದರಿಂದ ಗೊಂದಲಕ್ಕೆ ಒಳಗಾದ ಕ್ಯಾಂಟೀನ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಕೆ.ಆರ್‌.ಠಾಣೆಯ ಪೊಲೀಸರು ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಮಧ್ಯಾಹ್ನ ಇಂತಹ ಗೊಂದಲ ಉಂಟಾಗದಂತೆ ಎಚ್ಚರಿಕೆ ವಹಿಸಿದರು.

ಮಧ್ಯಾಹ್ನದ ನಿರೀಕ್ಷೆ ಮೀರಿ ಜನರು ಧಾವಿಸಿದ್ದರಿಂದ ಊಟ ಬೇಗವೇ ಖಾಲಿಯಾಯಿತು. ಪೊಲೀಸರು ಎಲ್ಲರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಅನ್ನ–ಸಾಂಬಾರ್‌, ಮೊಸರನ್ನ, ಪುಳಿಯೊಗರೆಯನ್ನು ವಿತರಿಸಲಾಯಿತು.

‘ಪ್ರತಿ ಕ್ಯಾಂಟೀನಿನಲ್ಲಿ ಒಂದು ಹೊತ್ತಿಗೆ 500 ಜನರಿಗೆ ಮಾತ್ರ ಊಟ ಅಥವಾ ಉಪಾಹಾರ ವಿತರಿಸಲು ಅವಕಾಶವಿದೆ. ಆಹಾರ ಸಿದ್ಧಪಡಿಸಿ, ವಿತರಿಸಲು ಗುತ್ತಿಗೆ ನೀಡಲಾಗಿದೆ. ಒಂದು ಹೊತ್ತಿಗೆ 5,500 ಜನರಿಗೆ ಹಾಗೂ ದಿನಕ್ಕೆ 16,500 ಜನರಿಗೆ ಆಹಾರ ವಿತರಿಸಲಾಗುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ‘ಕಾಡಾ’ ಆವರಣದಲ್ಲಿ ಪೊಲೀಸರು ಇದ್ದರು’ ಎಂದು ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾಹಿತಿ ನೀಡಿದರು.

***
ಒಂದು ಹೊತ್ತಿಗೆ 500 ಜನರಿಗೆ ಊಟ, ಉಪಾಹಾರ ಒದಗಿಸಲು ಅವಕಾಶವಿದೆ. ಮೊದಲು ಬಂದವರಿಗೆ ಮಾತ್ರ ಲಭ್ಯ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
ಜಿ.ಜಗದೀಶ್,
ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.