ADVERTISEMENT

ಪಾಲಿಕೆಗೆ ಸ್ವಚ್ಛತಾ ಕೆಲಸ ತಲೆನೋವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 6:34 IST
Last Updated 21 ಫೆಬ್ರುವರಿ 2018, 6:34 IST

ಮೈಸೂರು: ಮಹಾರಾಜ ಕಾಲೇಜು ಮೈದಾನದ ಸ್ವಚ್ಛತೆ ಕಾಪಾಡುವುದು ಮೈಸೂರು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ರಾಜಕೀಯ ಪಕ್ಷಗಳು ರ‍್ಯಾಲಿ, ಸಮಾವೇಶಗಳನ್ನು ನಡೆಸಲು ಈ ಮೈದಾನವನ್ನು ಆಯ್ದುಕೊಳ್ಳುತ್ತವೆ. ಖಾಸಗಿ ಕಂಪನಿ ಮತ್ತು ಸಂಸ್ಥೆಗಳು ಕೂಡಾ ಇಲ್ಲಿ ಆಗಿಂದಾಗ್ಗೆ ವಸ್ತುಪ್ರದರ್ಶನ ಆಯೋಜಿಸುತ್ತವೆ.

ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಮೈದಾನ ಕಸದ ತೊಟ್ಟಿಯಾಗಿ ಬದಲಾಗುತ್ತದೆ. ಪಕ್ಷಗಳು ಆಯೋಜಿಸುವ ಸಮಾವೇಶದಲ್ಲಿ ಪಾಲ್ಗೊಂಡವರು ನೀರಿನ ಬಾಟಲಿ, ಊಟದ ತಟ್ಟೆ, ಪ್ಲಾಸ್ಟಿಕ್‌ ಚೀಲಗಳನ್ನು ಎಸೆಯುವುದು ಸಾಮಾನ್ಯ.

ಸೋಮವಾರ ಇಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ನೋಡಿದಾಗ ಮೈದಾನದ ಹಲವೆಡೆ ಫ್ಲೆಕ್ಸ್‌, ಧ್ವಜ, ನೀರು ಮತ್ತು ಮಜ್ಜಿಗೆಯ ಖಾಲಿ ಪ್ಯಾಕೆಟ್‌ಗಳು ಬಿದ್ದಿದ್ದವು. ಅರಸು ಬೋರ್ಡಿಂಗ್‌ ಶಾಲೆಯ ಬಳಿ ಊಟದ ತಟ್ಟೆಗಳ ರಾಶಿಯೇ ಕಂಡುಬಂತು.

ADVERTISEMENT

ಪಾಲಿಕೆಯ ಸಿಬ್ಬಂದಿಗೆ ಕಸ ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಸುಮಾರು 50 ಮಂದಿ ಪೌರಕಾರ್ಮಿಕರು ಮಧ್ಯಾಹ್ನದವರೆಗೆ ಸ್ವಚ್ಛತಾ ಕೆಲಸ ಕೈಗೊಂಡು ಮೈದಾನವನ್ನು ‘ಸಹಜಸ್ಥಿತಿ’ಗೆ ತಂದರು.

ಪಾಲಿಕೆ ವತಿಯಿಂದ ಮೈದಾನದ ವಿವಿಧೆಡೆ ಕಸದ ತೊಟ್ಟಿಗಳನ್ನು ಇಡಲಾಗಿತ್ತು. ಆದರೆ, ಅವುಗಳ ಸಮರ್ಪಕ ಬಳಕೆಯಾಗಲಿಲ್ಲ. ಜ.25 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಾಲ್ಗೊಂಡಿದ್ದ ಸಮಾವೇಶದ ಸಂದರ್ಭವೂ ಈ ಮೈದಾನದಲ್ಲಿ ಕಸದ ರಾಶಿ ಬಿದ್ದಿತ್ತು.

ರಾಶಿ ಬಿದ್ದಿದ್ದ ನೀರಿನ ಪ್ಯಾಕೆಟ್‌: ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದವರಿಗೆ ಬಾಟಲಿಗಳ ಬದಲು ಪ್ಯಾಕೆಟ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಸಾವಿರಾರು ಪ್ಯಾಕೆಟ್‌ ನೀರು ತರಿಸಲಾಗಿತ್ತು.

ಆದರೆ, ಎಲ್ಲ ಪ್ಯಾಕೆಟ್‌ಗಳನ್ನು ವಿತರಿಸಲು ಆಗದ ಕಾರಣ ಹಲವು ಚೀಲಗಳು ಹಾಗೆಯೇ ಬಿದ್ದುಕೊಂಡಿದ್ದವು. ಮೈದಾನದಲ್ಲಿ ಬಿದ್ದಿದ್ದ ನೀರಿನ ಪ್ಯಾಕೆಟ್‌ಗಳನ್ನು ಮಂಗಳವಾರ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎತ್ತಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.