ADVERTISEMENT

ಕೆ.ಆರ್‌.ಆಸ್ಪತ್ರೆ: 800 ರೋಗಿಗಳಿಗೆ 63 ಭದ್ರತಾ ಸಿಬ್ಬಂದಿ!

ಭದ್ರತಾ ಸಿಬ್ಬಂದಿ ಕೊರತೆ; ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳು

ಕೆ.ಎಸ್.ಗಿರೀಶ್
Published 12 ಜುಲೈ 2021, 4:55 IST
Last Updated 12 ಜುಲೈ 2021, 4:55 IST
ಮೈಸೂರಿನಲ್ಲಿರುವ ಕೆ.ಆರ್.ಆಸ್ಪತ್ರೆ
ಮೈಸೂರಿನಲ್ಲಿರುವ ಕೆ.ಆರ್.ಆಸ್ಪತ್ರೆ   

ಮೈಸೂರು: 103 ವರ್ಷಗಳಷ್ಟು ಹಳೆಯದಾದ ನಗರದ ಕೆ.ಆರ್.ಆಸ್ಪತ್ರೆ ಯಲ್ಲಿ 800 ರೋಗಿಗಳಿಗೆ ಇರುವುದು 63 ಭದ್ರತಾ ಸಿಬ್ಬಂದಿ ಮಾತ್ರ. ಇವರು 4 ಪಾಳಿಗಳಲ್ಲಿ ಹಂಚಿ ಹೋಗಿದ್ದು, ಇನ್ನೂ 50 ಸಿಬ್ಬಂದಿ ಹೆಚ್ಚುವರಿಯಾಗಿ ಬೇಕು ಎಂಬುದಾಗಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹೇಳುತ್ತಾರೆ.

ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಧನ್ವಂತರಿ ರಸ್ತೆಗಳಿಗೆ ಹೊಂದಿಕೊಂಡಿರುವ ಈ ದೊಡ್ಡಾಸ್ಪತ್ರೆಯ ಭದ್ರತೆಯನ್ನು ಖಾಸಗಿ ಏಜೆನ್ಸಿಯೊಂದಕ್ಕೆ ಹೊರಗುತ್ತಿಗೆ ನೀಡಲಾಗಿದೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆಯವರೆಗೆ 13 ಸಿಬ್ಬಂದಿ, ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 16, ಮಧ್ಯಾಹ್ನ 2ರಿಂದ ರಾತ್ರಿ 8ರವರೆಗೆ 17 ಹಾಗೂ ರಾತ್ರಿ 8ರಿಂದ ಬೆಳಿಗ್ಗೆ 8 ಗಂಟೆಯವರೆಗೆ 17 ಸಿಬ್ಬಂದಿ ಇರುತ್ತಾರೆ. ಇವರೆಲ್ಲರೂ ಆಸ್ಪತ್ರೆಯ ವಿವಿಧ ಕಟ್ಟಡಗಳ ಉಸ್ತುವಾರಿ ಹೊತ್ತಿದ್ದಾರೆ.

ಒಟ್ಟು 1,050 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ನಿತ್ಯ ಶೇ 80ಕ್ಕಿಂತ ಅಧಿಕ ಹಾಸಿಗೆಗಳು ಭರ್ತಿಯಾಗಿರುತ್ತವೆ. ಕೋವಿಡ್‌ ಉಲ್ಬಣಗೊಂಡಿದ್ದಾಗ ಎಲ್ಲ ಹಾಸಿಗೆಗಳೂ ಭರ್ತಿಯಾಗಿದ್ದವು.

ADVERTISEMENT

ಆಸ್ಪತ್ರೆಯಲ್ಲಿವೆ 45 ಸಿಸಿಟಿವಿ: ವಿಸ್ತಾರವಾದ ಆಸ್ಪತ್ರೆ ಆವರಣದಲ್ಲಿ ಒಟ್ಟು 45 ಸಿಸಿಟಿವಿ ಕ್ಯಾಮೆರಾಗಳಿವೆ. ಬಹುತೇಕ ಎಲ್ಲ ಪ್ರಮುಖ ಪ್ರವೇಶದ್ವಾರಗಳಲ್ಲಿ ಅಳವಡಿಸಲಾಗಿದ್ದು, ಈ ಪೈಕಿ ಅನೇಕ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎಂಬ ಆರೋಪವೂ ಇದೆ.

ಪೊಲೀಸ್ ಹೊರ ಠಾಣೆ: ಕೆ.ಆರ್.ಆಸ್ಪತ್ರೆಯಲ್ಲಿ ದೇವರಾಜ ಪೊಲೀಸ್ ಠಾಣೆಯ ಹೊರ ಠಾಣೆಯೂ ಇದೆ. ಇಲ್ಲಿ ಕೆಲವೇ ಪೊಲೀಸರಷ್ಟೇ ಇರುತ್ತಾರೆ. ಅಪಘಾತ, ಹೊಡೆದಾಟ ಮೊದಲಾದ ಪ್ರಕರಣಗಳು ಬಂದಲ್ಲಿ ಮೆಡಿಕಲ್ ಲೀಗಲ್ ಪ್ರಕರಣಕ್ಕೆ ವರದಿ ನೀಡುವ ಕೆಲಸ ಮಾಡುತ್ತಾರೆ.

ಅಪರಾಧ ಚಟುವಟಿಕೆಗಳ ತಾಣ

ಕೆ.ಆರ್.ಆಸ್ಪತ್ರೆಯ ವಿಸ್ತಾರವಾದ ಆವರಣವು ರಾತ್ರಿ ವೇಳೆ ಮದ್ಯ ವ್ಯಸನಿಗಳ ತಾಣವಾಗಿದೆ. ಕತ್ತಲೆಯಲ್ಲಿ ಕುಳಿತು ಹಲವು ಮಂದಿ ಮದ್ಯ ಸೇವಿಸುತ್ತಾರೆ. ಒಂಟಿ ಮಹಿಳೆಯರನ್ನು ಹೆದರಿಸುತ್ತಾರೆ. ರಾತ್ರಿ ವೇಳೆ ಇಲ್ಲಿ ಮಲಗುವ ರೋಗಿಗಳ ಸಂಬಂಧಿಕರ ಜೇಬುಗಳಿಂದ ಹಣ ಕದಿಯುತ್ತಾರೆ. ‌‌

‘ರಾತ್ರಿ ವೇಳೆ ಭದ್ರತೆ ಹೆಚ್ಚಿಸಬೇಕಿದೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿಗಿಂತ ಪೊಲೀಸರೇ ಇಲ್ಲಿ ಗಸ್ತು ನಡೆಸಬೇಕಿದೆ’ ಎಂದು ನರ್ಸ್‌ವೊಬ್ಬರು ಹೇಳುತ್ತಾರೆ.

ಮೇಲ್ವಿಚಾರಕರ ಬದಲಾವಣೆ

ಒಂದು ತಿಂಗಳ ಹಿಂದೆಯಷ್ಟೇ ಭದ್ರತಾ ಸಿಬ್ಬಂದಿಯ ಎಲ್ಲ ಪಾಳಿಗಳ ಮೇಲ್ವಿಚಾರಕರನ್ನು ಬದಲಿಸಲಾಗಿತ್ತು ಎಂಬ ಸಂಗತಿ ಗೊತ್ತಾಗಿದೆ.

ಈ ಕುರಿತು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಸ್ಪತ್ರೆ ಅಧಿಕಾರಿಯೊಬ್ಬರು, ‘ಭದ್ರತಾ ಸಿಬ್ಬಂದಿಯ ಮೇಲ್ವಿಚಾರಕರನ್ನು ಬದಲಿಸಲಾಗಿತ್ತು. ಇದು ಕೆಲವರ ಅಸಮಾಧಾನಕ್ಕೂ ಕಾರಣವಾಗಿತ್ತು’ ಎಂದರು.

***

ಕೆ.ಆರ್.ಆಸ್ಪತ್ರೆಯ ಹೊರ ಠಾಣೆಗೆ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಕೋವಿಡ್‌ ವಿಭಾಗದಲ್ಲಿ ಸಿಬ್ಬಂದಿ 3 ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ

–ಶಶಿಧರ್, ದೇವರಾಜ ಉಪವಿಭಾಗದ ಎಸಿಪಿ

***

ಭದ್ರತೆಗಾಗಿ ಹೆಚ್ಚು ‘ಪಾಯಿಂಟ್‌’ಗಳನ್ನು ಗುರುತಿಸಲು, ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲು ನಿರ್ಧರಿಸಲಾಗಿದೆ

–ಡಾ.ಸಿ.ಪಿ.ನಂಜರಾಜ್‌, ಡೀನ್‌ ಮತ್ತು ನಿರ್ದೇಶಕ, ಮೈಸೂರು ವೈದ್ಯಕೀಯ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.