ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2025–26ನೇ ಸಾಲಿನ ಜುಲೈ ಆವೃತ್ತಿಯ ಪ್ರವೇಶ ಪ್ರಕ್ರಿಯೆ ಅರಂಭಗೊಂಡಿದ್ದು, ಸೆ. 15ರವರೆಗೆ ಅವಕಾಶವಿದೆ’ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.
‘ವಿವಿಗೆ ನ್ಯಾಕ್‌ನಿಂದ ‘ಎ+’ ಗ್ರೇಡ್ ದೊರೆತಿದ್ದು, ಯುಜಿಸಿ ಅನುಮೋದಿತ 10 ಆನ್‌ಲೈನ್ ಕೋರ್ಸ್‌ಗಳು ಸೇರಿದಂತೆ ಒಟ್ಟು 80 ಕೋರ್ಸ್‌ಗಳು ಲಭ್ಯವಿದೆ. ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯು, ಬಿಎಲ್‌ಐಎಸ್ಸಿ, ಬಿಇಡಿ, ಬಿಎಸ್‌ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್‌ಐಎಸ್ಸಿ, ಎಂಸಿಎ, ಎಂಎಸ್‌ಡಬ್ಲ್ಯೂ, ಎಂಎಸ್ಸಿ, ಎಂಬಿಎ, ಪಿಜಿ ಡಿಪ್ಲೊಮಾ, ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್‌ಗಳಿವೆ. ಮೈಸೂರಿನಲ್ಲಿರುವ ಕೇಂದ್ರ ಕಚೇರಿ ಹಾಗೂ ರಾಜ್ಯದ ಎಲ್ಲ 39 ಪ್ರಾದೇಶಿಕ ಕೇಂದ್ರಗಳಲ್ಲೂ ಪ್ರವೇಶ ಪಡೆಯಬಹುದಾಗಿದೆ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಇತರ ಕಾಲೇಜುಗಳಲ್ಲಿ ಅಥವಾ ‘ರೆಗ್ಯುಲರ್’ ಅಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಮುಂದುವರಿಸಲು ಆಗಿಲ್ಲದಿದ್ದರೆ, ಅರ್ಹತಾ ಮಾನದಂಡಗಳನ್ನು ಪೂರೈಸಿ 2 ಮತ್ತು 3ನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪಡೆದುಕೊಳ್ಳಬಹುದು’ ಎಂದು ಹೇಳಿದರು.
‘ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಸೈನ್ಯ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೊ/ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ/ ಪತಿ ಅಥವಾ ಇಬ್ಬರು ಮಕ್ಕಳಿಗೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಎಸ್ಆರ್‌ಟಿಸಿ, ಕೆಕೆಆರ್‌ಟಿಸಿ ನೌಕರರಿಗೆ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ಅಲ್ಪಸಂಖ್ಯಾತ (ಮುಸ್ಲಿಂ, ಕ್ರೈಸ್ತ, ಸಿಖ್ಖ್, ಬುದ್ಧ, ಜೈನ ಹಾಗೂ ಪಾರ್ಸಿ), ಲಿಂಗತ್ವ ಅಲ್ಪಸಂಖ್ಯಾತರು, ದೃಷ್ಟಿಹೀನರು (ಬಿ.ಇಡಿ, ಎಂಬಿಎ ಹೊರತುಪಡಿಸಿ), ಕೋವಿಡ್–19 ಸಾಂಕ್ರಾಮಿಕದಿಂದ ತಂದೆ–ತಾಯಿ ಮೃತರಾಗಿದ್ದಲ್ಲಿ ಆ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ದೊರೆಯಲಿದೆ. ಪರಿಶಿಷ್ಟ ಜಾತಿ, ಪಂಗಡದ ಹಾಗೂ ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ವಿದ್ಯಾರ್ಥಿವೇತನ ಸಿಗುತ್ತದೆ ಹಾಗೂ ಪೂರ್ಣ ಶುಲ್ಕ ಮರುಪಾವತಿಯಾಗುತ್ತದೆ’ ಎಂದು ವಿವರ ನೀಡಿದರು.
‘ಬೇರೆ ಕಾಲೇಜುಗಳಲ್ಲಿ ರೆಗ್ಯುಲರ್ ಪದವಿ ವ್ಯಾಸಂಗ ಮಾಡುತ್ತಿರುವವರು ಏಕಕಾಲದಲ್ಲಿ ಕೆಎಸ್‌ಒಯುನಲ್ಲೂ ಮತ್ತೊಂದು ಕೋರ್ಸ್ ವ್ಯಾಸಂಗ ಮಾಡಲು ಅವಕಾಶವಿದೆ. ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯದೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಪ್ರಮಾಣ ಹೆಚ್ಚಾಗುತ್ತಿದೆ. ₹ 8 ಕೋಟಿ ವೆಚ್ಚದಲ್ಲಿ ಕಲಿಕಾ ಸಂಪನ್ಮೂಲ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. 63 ಮಂದಿ ಉಪನ್ಯಾಸಕರಿಗೆ ‘ಮಾರ್ಗದರ್ಶಿತ್ವ’ ಕೊಡಲಾಗಿದೆ. ಪ್ರಸ್ತುತ 369 ಮಂದಿ ಪಿಎಚ್‌ಡಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಆಯಾ ಜಿಲ್ಲಾಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದು, ಪ್ರಾದೇಶಿಕ ಕೇಂದ್ರಗಳಿಗೆಂದು ಒಟ್ಟು 20 ಎಕರೆ ಜಾಗವನ್ನು ಉಚಿತವಾಗಿ ಪಡೆದುಕೊಂಡಿದ್ದೇವೆ. ಸಂಶೋಧನಾ ಚಟುವಟಿಕೆಗೂ ಅದ್ಯತೆ ನೀಡಿದ್ದು, 10 ಮಂದಿ ಬೋಧಕರಿಗೆ ತಲಾ ₹ 1 ಲಕ್ಷ ಒದಗಿಸಲಾಗಿದೆ’ ಎಂದು ತಿಳಿಸಿದರು.
ಕುಲಸಚಿವರಾದ ನವೀನ್‌ಕುಮಾರ್, ಆನಂದ್‌ಕುಮಾರ್, ಡೀನ್‌ಗಳಾದ ರಾಮನಾಥಂನಾಯ್ಡು, ಚಂದ್ರೇಗೌಡ, ಹಣಕಾಸು ಅಧಿಕಾರಿ ನಿರಂಜನರಾಜು, ಪ್ರವೇಶಾತಿ ನಿರ್ದೇಶಕ ಎಂ.ನಂದೀಶ್ ಪಾಲ್ಗೊಂಡಿದ್ದರು.
ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿವೆ ಡಿಜಿಟಲ್ ಮೌಲ್ಯಮಾಪನದ ಮೂಲಕ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆಪ್ರೊ.ಶರಣಪ್ಪ ವಿ.ಹಲಸೆ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.