ADVERTISEMENT

9ನೇ ಮಹಾ ಕುಂಭಮೇಳ: ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 9:46 IST
Last Updated 23 ಫೆಬ್ರುವರಿ 2013, 9:46 IST
ಮೈಸೂರು ಜಿಲ್ಲೆ ತಿ.ನರಸೀಪುರದ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಬ್ಯಾರಿಕೇಡ್ ಹಾಕಿರುವುದು.
ಮೈಸೂರು ಜಿಲ್ಲೆ ತಿ.ನರಸೀಪುರದ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಬ್ಯಾರಿಕೇಡ್ ಹಾಕಿರುವುದು.   

ತಿ.ನರಸೀಪುರ: ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಫೆ.23 ರಿಂದ ಮೂರು ದಿನಗಳ ಕಾಲ ದಕ್ಷಿಣ ಭಾರತದ 9 ನೇ ಮಹಾ ಕುಂಭಮೇಳ ನಡೆಯಲಿದೆ. ಕುಂಭಮೇಳದ ಬಂದೋಬಸ್ತ್‌ಗೆ ಜಿಲ್ಲೆಯ ವಿವಿಧ ಭಾಗಗಳಿಂದ ಪಟ್ಟಣಕ್ಕೆ ನೂರಾರು ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದಾರೆ. ಫೆ.23 ರಿಂದ ಪಟ್ಟಣ ಆಯಕಟ್ಟು ಸ್ಥಳಗಳು, ರಸ್ತೆಗಳಲ್ಲಿ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗುತ್ತದೆ.

ಪ್ರಚಾರದ ಕೊರತೆ: ಸ್ಥಳೀಯವಾಗಿ ಕುಂಭಮೇಳದ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಹೆಚ್ಚು ಪ್ರಚಾರ ಮಾಡಿದರೆ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇಟ್ಟುಕೊಳ್ಳಬಹುದಿತ್ತು. ಆದರೂ ಸ್ನಾನಕ್ಕೆ ಸಂಗಮದಲ್ಲಿ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎನ್ನುವುದು ಸ್ಥಳೀಯರ ಭಾವನೆ. ಅಧಿಕಾರಿಗಳಿಗೆ ನಗರ ಸ್ಥಳೀಯ ಚುನಾವಣೆಗಳ ಒತ್ತಡವಿದ್ದು, ಅದರ ನಡುವೆಯೂ ಕುಂಭಮೇಳದ ಸಿದ್ಧತಾ ಕಾರ್ಯ ಮುಗಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಹಾಗೂ ಅಧಿಕಾರಿಗಳೊಂದಿಗೆ ಸಂಗಮಕ್ಕೆ ಶುಕ್ರವಾರ ಭೇಟಿ ನೀಡಿದ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.
ಮುಖ್ಯಮಂತ್ರಿ ಅಥವಾ ಇನ್ನಿತರು ಗಣ್ಯರು ಕುಂಭ ಸ್ನಾನ ಮಾಡುವುದಾದರೆ ಸೂಕ್ತ ಸ್ಥಳವನ್ನು ಗುರುತಿಸುವುದು ಸೇರಿದಂತೆ ವಿವಿಧ ಸಿದ್ಧತೆಗಳನ್ನು ವೀಕ್ಷಿಸಿದರು.

ಆಲಗೂಡು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ಗುತ್ತಿಗೆದಾರ ಷರೀಫ್ , ನೀರಾವರಿ ಇಲಾಖೆಯ ಎಂಜಿನಿಯರ್ ಶ್ರೀಕಂಠಪ್ರಸಾದ್, ಬಸವರಾಜು ಹಾಗೂ ಹಲವು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.