ADVERTISEMENT

ಮೈಸೂರು | ಗರಿಗೆದರಿದ ಕ್ರಿಸ್‌ಮಸ್‌ ಸಂಭ್ರಮ

ದೀಪಾಲಂಕಾರದಲ್ಲಿ ಮಿನುಗಿದ ಚರ್ಚ್‌; ಗೋದಲಿಯಲ್ಲಿ ಜನಿಸಿದ ಯೇಸು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 7:56 IST
Last Updated 25 ಡಿಸೆಂಬರ್ 2023, 7:56 IST
<div class="paragraphs"><p>ಭಾನುವಾರ ರಾತ್ರಿ ಬರ್ನಾಡ್ ಮೋರಸ್‌ ಅವರು ಬಾಲ ಯೇಸುವನ್ನು ಗೋದಲಿಯತ್ತ ಕರೆದೊಯ್ದ ಕ್ಷಣ </p></div>

ಭಾನುವಾರ ರಾತ್ರಿ ಬರ್ನಾಡ್ ಮೋರಸ್‌ ಅವರು ಬಾಲ ಯೇಸುವನ್ನು ಗೋದಲಿಯತ್ತ ಕರೆದೊಯ್ದ ಕ್ಷಣ

   

ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಮೈಸೂರು: ನಗರದಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಭಾನುವಾರ ಮಧ್ಯರಾತ್ರಿ ಸಂಭ್ರಮದ ಚಾಲನೆ ದೊರೆಯಿತು.

ADVERTISEMENT

ಮಾಗಿಯ ಚಳಿಗೆ ಮೈ ತಾಕುತ್ತಿದ್ದರೂ, ಬೆಚ್ಚಗಿನ ಗೋದಲಿಯಲ್ಲಿ ಜನಿಸುವ ಬಾಲ ಯೇಸುವನ್ನು ಕಾಣಲು ಭಾನುವಾರ ರಾತ್ರಿ ನಗರದ ಚರ್ಚುಗಳ ಬಳಿ ಸೇರಿದ್ದ ಜನರು ಸಮಯ ಹನ್ನೆರಡಾಗುತ್ತಿದ್ದಂತೆ ಭಾವಪರವಶಗೊಳಗಾದರು.

‌ದೀಪಾಲಂಕಾರದಿಂದ ಕ್ಷಣಕ್ಕೊಂದೊಂದು ಬಣ್ಣ ಹೊತ್ತು ಮಿನುಗುತ್ತಿದ್ದ ಸೇಂಟ್ ಫಿಲೋಮಿನಾ ಚರ್ಚ್‌, ತೂಗುವ ಮಿಣುಕು ನಕ್ಷತ್ರಗಳ ಗೊಂಚಲು ಹೊತ್ತ ಮರಗಳು, ಗೋದಲಿಯಲ್ಲಿ ಜೀವತಳೆದಂತಿದ್ದ ಕುರಿ, ಮೇಕೆ, ದನಗಳ ಪ್ರತಿಕೃತಿಗಳು ಹಾಗೂ ಮಾಯಾಲೋಕವನ್ನು ಸೃಷ್ಟಿಸುತ್ತಿದ್ದ ಕ್ಯಾರಲ್‌ ಗಾಯನವೂ ನಗರವಾಸಿಗಳಿಗೆ ಕ್ರಿಸ್‌ಮಸ್ ಸಂಭ್ರಮದ ಬಿಸಿ ಏರಿಸತೊಡಗಿದವು.

ಮೈಸೂರು ಧರ್ಮಕ್ಷೇತ್ರ ಆಡಳಿತಾಧಿಕಾರಿ ಬರ್ನಾರ್ಡ್‌ ಮೋರಸ್‌ ಆಗಮಿಸುತ್ತಿದ್ದಂತೆ, ಪ್ರಾರಂಭವಾದ ಪೂಜೆಯ ವಿಧಿ ವಿಧಾನಗಳು ನೆರೆದವರನ್ನು ಭಕ್ತಿಯಲ್ಲಿ ತೇಲಿಸತೊಡಗಿತು. ಕರುಣೆಯ ಸಂಕೇತವಾದ ಶಿಲುಬೆ ಹಿಡಿದವರು, ಅಕ್ಕಪಕ್ಕದಲ್ಲಿ ಕಣ್ಣಿನಂತೆ ಅರಿವಿನ ಸಂಕೇತವಾದ ಬೆಳಕಿನ 2 ಲಾಟೀನುಗಳನ್ನು ಹಿಡಿದು ಸಾಗಿದ ಬಲಿ ಪೂಜೆಯ ಮೆರವಣಿಗೆಯಲ್ಲಿ, ಎಲ್ಲ ಪಿತೃ ದೇವತೆಗಳನ್ನು ಸ್ಮರಿಸಲಾಯಿತು.

ಧಾರ್ಮಿಕ ಕಾರ್ಯಗಳ ಎಲ್ಲ ಹಂತಗಳು ಮುಗಿದು, ಶುದ್ಧ ಆತ್ಮವಾದ ದೇವರ ಮಗ ಯೇಸು ಜನಿಸುವ ಹೊತ್ತು, ಒಂದು ತಿಂಗಳಿಂದ ಈ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಲು ಕಾದಿದ್ದ ಸಮುದಾಯದ ಜನರು ಧನ್ಯತೆಯಿಂದ ಸ್ಮರಿಸಿದರು. ಬಳಿಕ ಬಾಲ ಯೇಸುವನ್ನು ಗೋದಲಿಯಲ್ಲಿ ಇಡಲು ತೆರಳಿದ ಮೆರವಣಿಗೆಯುದ್ದಕ್ಕೂ ಭಕ್ತಿಯ ನಮನ ಸಲ್ಲಿಸಿದರು. ಚರ್ಚ್‌ನ ಗುರುಗಳಾದ ಸ್ಟ್ಯಾನಿ ಅಲ್ಮೆಡಾ, ಪೀಟರ್‌ ಜತೆಯಿದ್ದರು.

ಎಲ್ಲರ ಹಬ್ಬ ಕ್ರಿಸ್‌ಮಸ್‌: ಸೇಂಟ್‌ ಫಿಲೋಮಿನಾ ಚರ್ಚ್‌ ಆವರಣದಲ್ಲಿ ನಡೆದ ಹಬ್ಬದ ಆಚರಣೆಯಲ್ಲಿ ಕ್ರೈಸ್ತರು ಮಾತ್ರವಲ್ಲದೇ ಎಲ್ಲ ಸಮುದಾಯದವರೂ ಪಾಲ್ಗೊಂಡು ಸಂಭ್ರಮಿಸಿದರು. ಪರಸ್ಪರ ಕ್ರಿಸ್‌ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು. ವಾರಂತ್ಯ ರಜೆಯಿರುವುದರಿಂದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಾಹನ ದಟ್ಟಣೆಯಲ್ಲಿಯೂ ಹೆಚ್ಚಳವಾಗಿದ್ದು, ಫೈವ್‌ಲೈಟ್‌ ವೃತ್ತದಿಂದಲೇ ಟ್ರಾಫಿಕ್‌ ಪೊಲೀಸರು ವಾಹನ ನಿಯಂತ್ರಣದಲ್ಲಿ ತೊಡಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.