ADVERTISEMENT

ಮೈಸೂರು | ಅಂಗವಿಕಲರಿಗೆಂದೇ ಪ್ರತ್ಯೇಕ ಕಾಲೊನಿ; ಅಶಕ್ತರಿಗೆ ನಿವೇಶನದ ಆಸರೆ

ದಡದಹಳ್ಳಿ ಬಳಿ ನಾಲ್ಕು ಎಕರೆ ಜಾಗ ಗುರುತು

ಜಿತೇಂದ್ರ ಆರ್
Published 15 ಜೂನ್ 2025, 6:51 IST
Last Updated 15 ಜೂನ್ 2025, 6:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ಸ್ವಂತ ಸೂರು ಹೊಂದುವ ಜಿಲ್ಲೆಯ ಅಂಗವಿಕಲರ ಕನಸು ಸದ್ಯದಲ್ಲೇ ನನಸಾಗಲಿದೆ. ಅವರಿಗೆಂದೇ ನಗರದ ಹೊರವಲಯದಲ್ಲಿ ಪ್ರತ್ಯೇಕ ಕಾಲೊನಿ ನಿರ್ಮಾಣಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಬಹುತೇಕ ಅಂಗವಿಕಲರು ತಮಗೊಂದು ಸ್ವಂತ ಮನೆ ಇಲ್ಲವೇ ನಿವೇಶನ ಒದಗಿಸುವಂತೆ ಮನವಿ ಮಾಡಿದ್ದರು. ಅದಕ್ಕಾಗಿ ಯಾವುದಾದರೂ ಸರ್ಕಾರಿ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಮೈಸೂರು ತಹಶೀಲ್ದಾರ್ ಮಹೇಶ್‌ಕುಮಾರ್ ನೇತೃತ್ವದ ತಂಡವು ಲಲಿತಾದ್ರಿಪುರ ಸೇರಿದಂತೆ ವಿವಿಧೆಡೆ ಜಾಗಕ್ಕಾಗಿ ಹುಡುಕಾಟ ನಡೆಸಿತ್ತು. ಅಂತಿಮವಾಗಿ ರಿಂಗ್‌ ರಸ್ತೆಗೆ ಸಮೀಪದಲ್ಲಿರುವ ದಡದಹಳ್ಳಿಯಲ್ಲಿ ಸರ್ವೆ 66ರಲ್ಲಿನ ನಾಲ್ಕು ಎಕರೆ ಜಾಗವನ್ನು ಗುರುತು ಮಾಡಲಾಗಿದೆ.

ADVERTISEMENT

ಸದ್ಯದಲ್ಲೇ ತಾಲ್ಲೂಕು ಆಡಳಿತವು ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಿದ್ದು, ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಒಪ್ಪಿಗೆಯ ಮುದ್ರೆ ಬಿದ್ದಲ್ಲಿ ಬಡಾವಣೆ ನಿರ್ಮಾಣ ಕನಸು ನನಸಾಗಲಿದೆ. ತಾಲ್ಲೂಕು ಆಡಳಿತದಿಂದ ಮೈಸೂರು ಮಹಾನಗರ ಪಾಲಿಕೆಗೆ ಜಮೀನು ಹಸ್ತಾಂತರ ಆಗಲಿದ್ದು, ಪಾಲಿಕೆಯೇ ಬಡಾವಣೆ ನಿರ್ಮಾಣದ ಜೊತೆಗೆ ಅರ್ಹರನ್ನು ಗುರುತಿಸಿ ನಿವೇಶನ ಹಂಚುವ ಕೆಲಸ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಕೇವಲ ಬಡಾವಣೆ ನಿರ್ಮಾಣ ಮಾತ್ರವಲ್ಲ, ಅಂಗವಿಕಲ ಸ್ನೇಹಿ ಮೂಲಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಸ್ವಾವಲಂಬನೆಗೆ ಅನುಕೂಲವಾಗುವಂತೆ ಕೌಶಲಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಇಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸ್ವಾಗತಾರ್ಹ: 

‘ಅಂಗವಿಕಲರಿಗೆ ಪ್ರತ್ಯೇಕ ಬಡಾವಣೆ ನಿರ್ಮಾಣಕ್ಕಾಗಿ ಜಾಗ ಗುರುತಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ದಶಕಗಳಿಂದ ಹೋರಾಟ ನಡೆಸಿದ್ದೆವು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಂಗವಿಕರ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ. ಪ್ರಭುಸ್ವಾಮಿ.

‘1983-84ನೇ ಸಾಲಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಅಂಗವಿಕಲರಿಗೆಂದೇ ಮನೆಗಳನ್ನು ನಿರ್ಮಿಸಿ ಹಂಚಿತ್ತು. ಅದಾದ ಬಳಿಕ ನಿವೇಶನ ಸೇರಿದಂತೆ ಯಾವೊಂದು ಸೌಲಭ್ಯವೂ ಸಿಕ್ಕಿಲ್ಲ. ಮುಡಾ ಕಚೇರಿ, ಜಿಲ್ಲಾಡಳಿತ ಭವನ ಸೇರಿದಂತೆ ವಿವಿಧೆಡೆ ಇದಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.