ADVERTISEMENT

‘ಜೀವನ ಪಾಠ ಕಲಿಸುವ ಕ್ರೀಡೆ’

ನಗರ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 3:15 IST
Last Updated 27 ನವೆಂಬರ್ 2025, 3:15 IST
ಮೈಸೂರಿನ ಸಿಎಆರ್‌ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್‌ ಸಿಬ್ಬಂದಿ ಎನ್‌.ವಿಜಯಶಂಕರ್‌ ಅವರು ನ್ಯಾಯಾಧೀಶೆ ಉಷಾರಾಣಿ ಅವರಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸಿದರು – ಪ್ರಜಾವಾಣಿ ಚಿತ್ರ
ಮೈಸೂರಿನ ಸಿಎಆರ್‌ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್‌ ಸಿಬ್ಬಂದಿ ಎನ್‌.ವಿಜಯಶಂಕರ್‌ ಅವರು ನ್ಯಾಯಾಧೀಶೆ ಉಷಾರಾಣಿ ಅವರಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸಿದರು – ಪ್ರಜಾವಾಣಿ ಚಿತ್ರ   

ಮೈಸೂರು: ‘ಶಾಲಾ ಪುಸ್ತಕದಿಂದ ದೊರೆಯದ ಪಾಠ ಕ್ರೀಡೆಯಿಂದ ಸಿಗುತ್ತದೆ. ಅಡೆತಡೆಯಿಲ್ಲದ ಜೀವನ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಉಷಾರಾಣಿ ತಿಳಿಸಿದರು.

ನಗರ ಪೊಲೀಸ್ ಕಮಿಷನರೇಟ್‌ ವತಿಯಿಂದ ಚಾಮುಂಡಿಬೆಟ್ಟದ ತಪ್ಪಲಿನ ಸಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

‘ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ. ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪೊಲೀಸರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಒತ್ತಡ ನಿರ್ವಹಣೆ ಸಾಧ್ಯ. ಎಲ್ಲರೂ ನಿತ್ಯ ಕೆಲ ಸಮಯವನ್ನು ಕ್ರೀಡಾ ಚಟುವಟಿಕೆಗಾಗಿ ಮೀಸಲಿಡಿ’ ಎಂದು ಸಲಹೆ ನೀಡಿದರು.

ADVERTISEMENT

‘ದೇಶದಲ್ಲಿ ಕ್ರೀಡಾಪಟುಗಳನ್ನು ಗೌರವಿಸುವ ಸಂಸ್ಕೃತಿ ಇದೆ. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮನೆಯಿಂದ ಪ್ರೋತ್ಸಾಹ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಮೊದಲ 10 ಸ್ಥಾನದೊಳಗೆ ದೇಶದ ಹೆಸರು ಬರಲು ಶ್ರಮಿಸಬೇಕು’ ಎಂದರು. 

ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ಮೂಲಕ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಆರ್.ಕೆ.ಸುರೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎನ್‌.ವಿಜಯಶಂಕರ್‌ ಕ್ರೀಡಾಜ್ಯೋತಿ ಹಿಡಿದು ಸಾಗಿದರು.

ಸಿಎಆರ್, ನರಸಿಂಹರಾಜ ಉಪ ವಿಭಾಗ, ಕೃಷ್ಣರಾಜ ಉಪ ವಿಭಾಗ, ದೇವರಾಜ ಉಪ ವಿಭಾಗ, ವಿಜಯನಗರ ಉಪ ವಿಭಾಗ, ಸಂಚಾರ ಉಪ ವಿಭಾಗ, ವಿಶೇಷ ಪಡೆ, ಮಹಿಳಾ ಪಡೆ, ಅಶ್ವರೋಹಿ ದಳದ ಸಿಬ್ಬಂದಿ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಅಂತರರಾಷ್ಟ್ರೀಯ ಕ್ರೀಡಾಪಟು ಧನುಷ ಎಂ.ಆರ್‌, ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್‌.ಎನ್‌.ಬಿಂದುರಾಣಿ, ಕೆ.ಎಸ್‌.ಸುಂದರ್‌ ರಾಜ್‌, ಮಾರುತಿ, ಸಿದ್ದನಗೌಡ ಪಾಟೀಲ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.