ADVERTISEMENT

ಭಿಕ್ಷುಕಿಯ ಮಗಳ ಅಪಹರಣ

ಪತ್ತೆಗೆ ಪೊಲೀಸರಿಂದ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 4:22 IST
Last Updated 3 ಅಕ್ಟೋಬರ್ 2020, 4:22 IST

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಗುರುವಾರ ಭಿಕ್ಷುಕಿಯ 3 ವರ್ಷದ ಹೆಣ್ಣು ಮಗಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ್ದಾನೆ.

ಕೆ.ಆರ್.ನಗರ ಮೂಲದ ಪಾರ್ವತಿ ಕಳೆದ 9 ವರ್ಷಗಳಿಂದ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ತನ್ನ ತಾಯಿ ಹಾಗೂ ಮಗುವಿನೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾಳೆ.

ಗುರುವಾರ ವ್ಯಕ್ತಿಯೊಬ್ಬ ಪಾರ್ವತಿ ಕೈಗೆ ₹ 10 ನೀಡಿ ಮಗುವನ್ನು ಸಾಕಲು ಕೊಡುವೆಯಾ ಎಂದು ಕೇಳಿದ್ದ ಎನ್ನಲಾಗಿದೆ. ಆಗ ಅಂಜಿದ ಪಾರ್ವತಿ ಬೀಕ್ಷೆ ಬೇಡುವುದನ್ನು ಬಿಟ್ಟು ಮಗಳೊಂದಿಗೆ ದೊಡ್ಡದ ರಥದ ಅಡಿ ಹೋಗಿ ಮಲಗಿದ್ದಾಳೆ. ಸ್ವಲ್ವ ಸಮಯದ ನಂತರ ಎಚ್ಚರವಾದಾಗ ಜೊತೆಯಲ್ಲಿದ್ದ ಮಗಳು ಇರಲಿಲ್ಲ.

ADVERTISEMENT

ಈ ಕುರಿತು ಸ್ಥಳೀಯ ಠಾಣೆಯಲ್ಲಿದ ದೂರ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟೀ ಅಂಗಡಿ ನಡೆಸುತ್ತಿದ್ದ ಚಾಮಲಾಪುರ ಹುಂಡಿಯ ಶ್ರೀಕಂಠನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇವಾಲಯದ ಸುತ್ತಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ ಅಪಹರಣಕಾರನನ್ನು ಗುರುತಿಸುವ ಪ್ರಯತ್ನ ನಡೆಸಿದ್ದೇವೆ’ ಎಂದು ತಿಳಿಸಿದರು.

ಹಿಂದೆಯೂ ಮಗನ ಅಪಹರಣ: 2016ರಲ್ಲಿ ಇದೇ ಭಿಕ್ಷುಕಿಯ ಮಗನನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲ ಭೇದಿಸಿ, ಬಾಲಕನನ್ನು ರಕ್ಷಿಸಿದ್ದರು. ಅಲ್ಲದೇ ಆತನನ್ನು ಮೈಸೂರಿನ ಮಕ್ಕಳ ಬಾಲ ಮಂದಿರದಲ್ಲಿ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.