ADVERTISEMENT

ಪ್ರತ್ಯೇಕ ಅಪಘಾತ; ನಾಲ್ವರ ಸಾವು

ಮೃತಪಟ್ಟವರಲ್ಲಿ ಇಬ್ಬರು ಪಾದಚಾರಿಗಳು, ಮತ್ತಿಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2019, 19:30 IST
Last Updated 10 ಫೆಬ್ರುವರಿ 2019, 19:30 IST

ಮೈಸೂರು: ಜಿಲ್ಲೆಯ ವಿವಿಧೆಡೆ ನಡೆದ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ಪಾದಚಾರಿಗಳು ಸೇರಿದ್ದಾರೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಬ್ಬ ಬಾಲಕಿಗೆ ಹಾಗೂ ಒಬ್ಬ ಹಿರಿಯ ನಾಗರಿಕರಿಗೆ ತೀವ್ರವಾದ ಗಾಯಗಳಾಗಿವೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಸಿದ್ದಯ್ಯನಹುಂಡಿ ಗ್ರಾಮದ ಶ್ರೀಕಂಠಯ್ಯ ಅವರು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವಾಗ ಮಾನಂದವಾಡಿ ರಸ್ತೆಯಲ್ಲಿ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆಯನ್ನು ನೋಡಿದ ಇವರ ಪುತ್ರ ಮೂರ್ತಿ ಸ್ಥಳಕ್ಕೆ ಬಂದು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಕಾರಿನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿರಿಯಾಪಟ್ಟಣದ ಶಾರದಾ ಚಿತ್ರ ಮಂದಿರದ ಬಳಿ ರಸ್ತೆ ದಾಟುತ್ತಿದ್ದ ಶಂಕರವ್ವ (70) ಎಂಬುವವರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಪಾದಚಾರಿ ಬಾಲಕಿಗೆ ಗಾಯ:

ಮೈಸೂರಿನ ಕ್ಯಾತಮಾರನಹಳ್ಳಿ ರಸ್ತೆಯ ಎಡಬದಿಯಲ್ಲಿ ನಡೆದು ಹೋಗುತ್ತಿದ್ದ ಶೇಖರ್ ಅವರ ಪುತ್ರಿ ಭೈರವಿ (4) ಎಂಬ ಬಾಲಕಿಗೆ ಬೈಕೊಂದು ಡಿಕ್ಕಿ ಹೊಡೆದಿದೆ. ಇದರಿಂದ ಬಾಲಕಿಯ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ನಾಗರಿಕರಿಗೆ ಗಾಯ:

ನಂಜನಗೂಡಿನ ಗುಂಡ್ಲುಪೇಟೆ ರಸ್ತೆಯನ್ನು ನಿವೃತ್ತ ಶಿಕ್ಷಕ ಮಹದೇವಪ್ಪ (76) ಅವರು ದಾಟುವಾಗ ಬೈಕೊಂದು ಡಿಕ್ಕಿ ಹೊಡೆದಿದೆ. ಇದರಿಂದ ಇವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.