ADVERTISEMENT

ಮಕ್ಕಳ ಮೇಲೆ ಒತ್ತಡ ಸಲ್ಲದು: ಪಿ.ಶಿವರಾಜ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 14:13 IST
Last Updated 6 ಸೆಪ್ಟೆಂಬರ್ 2022, 14:13 IST
ಅದಮ್ಯ ರಂಗ ಶಾಲೆಯ ವತಿಯಿಂದ ಈಚೆಗೆ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು
ಅದಮ್ಯ ರಂಗ ಶಾಲೆಯ ವತಿಯಿಂದ ಈಚೆಗೆ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು   

ಮೈಸೂರು: ‘ಪೋಷಕರು ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೆ, ಅವರ ಸಹಜ ಪ್ರತಿಭೆ ಅರಳಿ, ಸಮಾಜಕ್ಕೆ ಸುಗಂಧ ಸೂಸುವಂತೆ ಮಾರ್ಗದರ್ಶನ ಮಾಡಬೇಕು’ ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಪಿ.ಶಿವರಾಜ್ ಸಲಹೆ ನೀಡಿದರು.

ಅದಮ್ಯ ರಂಗ ಶಾಲೆಯ ವತಿಯಿಂದ ಜಯಲಕ್ಷ್ಮಿಪುರಂನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಈಚೆಗೆ ನಡೆದ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಹಾಗೂ ‘ಹಲೋ ಯಮ’ ಮಕ್ಕಳ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಅರಳುತ್ತಿರುವ ಮೊಗ್ಗುಗಳಂತೆ. ಅವರಲ್ಲಿ ಸುಪ್ತ ಪ್ರತಿಭೆ ಹುದುಗಿರುತ್ತದೆ. ಅದನ್ನು ಹೊರತೆಗೆಯುವುದು ಎಲ್ಲರ ಜವಾಬ್ದಾರಿಯಾಗಿದೆ’ ಎಂದರು.

ADVERTISEMENT

ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ, ಸಂಗೀತ, ರಂಗಭೂಮಿ ಕ್ಷೇತ್ರದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಸದಭಿರುಚಿ ಬೆಳೆದು ಉತ್ತಮ ಸಂಸ್ಕಾರ ದೊರೆಯುತ್ತದೆ. ಅವರ ವ್ಯಕ್ತಿತ್ವ ವಿಕಾಸವಾಗುತ್ತದೆ. ಶ್ರೇಷ್ಠ ನಾಗರಿಕರಾಗಿ ಹೊರ ಹೊಮ್ಮುತ್ತಾರೆ’ ಎಂದು ತಿಳಿಸಿದರು.

ಊಟಿ ರಸ್ತೆಯ ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್.ಎಸ್.ಎಸ್‌. ಕಾರ್ಯದರ್ಶಿ ಎನ್.ಕಾವ್ಯಾ, ಎನ್.ಎ.ಜೀವನ್, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕೆ.ಟಿ.ಯಮುನಾ ಅವರಿಗೆ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ, ಅದಮ್ಯ ರಂಗಶಾಲೆಯ ಸ್ಥಾಪಕ ಅದಮ್ಯ ಚಂದ್ರು ಮಂಡ್ಯ, ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್.ಎಸ್.ಎಸ್. ಕ್ರಾರ್ಯಕ್ರಮ ಅಧಿಕಾರಿ ಎನ್.ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.