ಮೈಸೂರು: ಕೊಲೆಯಾಗಿದ್ದಾಳೆ ಎಂದು ಸುದ್ದಿಯಾಗಿದ್ದ ಮಲ್ಲಿಗೆ ಪತ್ತೆ ಪ್ರಕರಣದ ವಿಚಾರಣೆ ನಡೆಸಿದ ಐದನೇ ಜಿಲ್ಲಾ ಸೆಷನ್ ನ್ಯಾಯಾಲಯವು ಏ. 23ಕ್ಕೆ ತೀರ್ಪು ಕಾಯ್ದಿರಿಸಿ ಆದೇಶಿಸಿತು.
ಪೊಲೀಸ್ ವರಿಷ್ಠಾಧಿಕಾರಿಯ ವಿಚಾರಣಾ ವರದಿಯನ್ನು ಬೈಲುಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣದ ಸಂದರ್ಭದಲ್ಲಿ ತನಿಖಾಧಿಕಾರಿಗಳಾಗಿದ್ದ ಬಿ.ಜಿ.ಪ್ರಕಾಶ್, ಮಹೇಶ್ ಕುಮಾರ್, ಪ್ರಕಾಶ್ ಎತ್ತಿಮನಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ದೋಷಾರೋಪ ಪಟ್ಟಿಗೆ ಏನು ಆಧಾರವಿದೆ ಎಂದು ಪ್ರಶ್ನಿಸಿದರು.
ಆರೋಪಿ ಎನ್ನಲಾದ ಸುರೇಶ್ ಪರ ವಕೀಲ ಪಾಂಡು ಪೂಜಾರಿ, 'ಪೊಲೀಸರು ಉದ್ದೇಶ ಪೂರ್ವಕವಾಗಿ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿ ಸುಳ್ಳು ಕಥೆ ಸೃಷ್ಟಿಸಿದ್ದಾರೆ. ತನಿಖಾಧಿಕಾರಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕು' ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಾಧೀಶ ಗುರುರಾಜ್ ತೀರ್ಪು ಕಾಯ್ದಿರಿಸಿ, ವಿಚಾರಣೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.