ADVERTISEMENT

ಎಚ್.ಡಿ. ಕೋಟೆ: ಆದಿವಾಸಿ ಅನುಮಾನಾಸ್ಪದ ಸಾವು, ಪ್ರತಿಭಟನೆ

ಜಿಂಕೆ ಮಾಂಸ ಕದ್ದ ಆರೋಪದಲ್ಲಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 14:29 IST
Last Updated 12 ಅಕ್ಟೋಬರ್ 2022, 14:29 IST
ಎಚ್.ಡಿ.ಕೋಟೆ ತಾಲ್ಲೂಕಿನ ಎನ್. ಬೇಗೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು
ಎಚ್.ಡಿ.ಕೋಟೆ ತಾಲ್ಲೂಕಿನ ಎನ್. ಬೇಗೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು   

ಎಚ್.ಡಿ. ಕೋಟೆ: ಜಿಂಕೆ ಕದ್ದ ಆರೋಪದಲ್ಲಿ ಬಂಧಿತರಾಗಿ ಪೊಲೀಸರ ವಶದಲ್ಲಿದ್ದ, ಜೇನು ಕುರುಬ ಸಮುದಾಯದ ಹೊಸಳ್ಳಿ ಹಾಡಿ ನಿವಾಸಿ ಕರಿಯಪ್ಪ (45) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ’ಲಾಕಪ್‌ ಡೆತ್‌‘ ಆಗಿದೆ ಎಂದು ಆರೋಪಿಸಿ,ಆದಿವಾಸಿ ಗಿರಿಜನರು ಮತ್ತು ಸಾರ್ವಜನಿಕರು ಬೇಗೂರು ವಲರ ಅರಣ್ಯಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಘಟನೆ ನಡೆದ ಬೆನ್ನಲ್ಲೇ, ಅರಣ್ಯ ಸಿಬ್ಬಂದಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಅವರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಕೂಲಿ ಕೆಲಸಕ್ಕೆಂದು ಹಾಡಿಯಿಂದ ಹೊರಗೆ ಬಂದರೂ ಸಂಜೆ ಹಾಡಿಗೆ ಮರಳುತ್ತಿದ್ದರು. ಜಿಂಕೆ ಮಾಂಸ ಕದ್ದ ಆರೋಪದಲ್ಲಿ ಮೂರು ದಿನದ ಹಿಂದೆ ಅರಣ್ಯಾಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು.

ADVERTISEMENT

ಆಗಿದ್ದೇನು?: ‘ಬಂಡೀಪುರ ರಾಷ್ಟ್ರೀಯ ಉದ್ಯಾನದಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿಹಾಡಿಯಲ್ಲಿ ಜಿಂಕೆ ಮಾಂಸ ಕದ್ದ ಆರೋಪದಲ್ಲಿ ಕರಿಯಪ್ಪ ಅವರನ್ನು ಮೂರು ದಿನಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಅರಣ್ಯಾಧಿಕಾರಿಗಳು ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಲ್ಲಿ ಮೃತಪಟ್ಟರು’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಸಕರ ಭೇಟಿ:ಎಚ್‌.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದರು. ಅರಣ್ಯ ಅಧಿಕಾರಿಗಳ ಜೊತೆ ಮಾತನಾಡಿ,’ಕುಟುಂಬಸ್ಥರಿಗೆ ₹10 ಲಕ್ಷ ಪರಿಹಾರ ಹಾಗೂ ಕುಟುಂಬದಲ್ಲಿ ಒಬ್ಬರಿಗೆ ಕೆಲಸ ನೀಡಬೇಕು. ಅಕ್ರಮವಾಗಿ ಬಂಧಿಸಿದ ಅರಣ್ಯ ಇಲಾಖೆಯ ಐವರು ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು‘ ಎಂದು ಒತ್ತಾಯಿಸಿದ್ದಾರೆ.

’ಮೂರು ದಿನಗಳಿಂದ ಅರಣ್ಯಾಧಿಕಾರಿ ಕಚೇರಿಯಲ್ಲೇ ಇರಿಸಿ ಹೊಡೆದು ಸಾಯಿಸಲಾಗಿದೆ. ತಲೆಗೆ ಏಟು ಬಿದ್ದು ಕರಿಯಪ್ಪ ಸಾವನ್ನಪ್ಪಿದ್ದಾರೆ‘ ಎಂದುಆದಿವಾಸಿ ಮುಖಂಡ ಪುಟ್ಟಬಸವ ಆರೋಪಿಸಿದ್ದಾರೆ.

ತಾತ್ಕಾಲಿಕವಾಗಿ ಕುಟುಂಬದವರಿಗೆ ನೌಕರಿ ನೀಡಲಾಗುವುದು. ಶಾಸಕರ ಬೇಡಿಕೆಯಂತೆ ಹೆಚ್ಚಿನ ವಿಚಾರಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು. ಅಧಿಕಾರಿಗಳಿಂದ ತಪ್ಪು ಕಂಡು ಬಂದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು ಎಂದುಬಂಡೀಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.