ಮೈಸೂರು: ‘ವಿದ್ಯಾರ್ಥಿಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು’ ಎಂದು ಬಿಜೆಪಿ ಮುಖಂಡ ಅಪ್ಪಣ್ಣ ಹೇಳಿದರು.
ಮೈಸೂರು ತಾಲ್ಲೂಕು ನಾಯಕರ ಸಂಘದಿಂದ ಇಲ್ಲಿನ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2024–25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವು ವಿದ್ಯಾರ್ಥಿಗಳಿದ್ದಾಗ ಇಷ್ಟೊಂದು ಸೌಲಭ್ಯ ಹಾಗೂ ಪ್ರೋತ್ಸಾಹ ದೊರೆಯುತ್ತಿರಲಿಲ್ಲ. ನಾವೆಲ್ಲರೂ ಕಷ್ಟಪಟ್ಟು ಓದಿದವರು. ಆಗ, ಎಸ್ಎಸ್‌ಎಲ್‌ಸಿ ಪರೀಕ್ಷೆ ಪಾಸಾದರೆ ಅದೇ ದೊಡ್ಡ ವಿಷಯ. ಗಣಿತ ಹಾಗೂ ಹಿಂದಿ ನಮಗೆ ಕಬ್ಬಿಣದ ಕಡಲೆಯಾಗಿತ್ತು. ಈಗಿನ ಮಕ್ಕಳು ಲಭ್ಯ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವಿದ್ಯೆ ಸೋಮಾರಿಗಳ ಸ್ವತ್ತಲ್ಲ. ಬಹಳ ಕಷ್ಟಪಡಬೇಕು. ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂದೇ ಓದಬಾರದು. ಜ್ಞಾನಾರ್ಜನೆಗಾಗಿ ಓದಬೇಕು. ಆಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಟಿವಿ ನೋಡುವುದರಿಂದ ದೂರವಿದ್ದು ಹೆಚ್ಚಿನ ಸಮಯವನ್ನು ಓದಿಗೆ ವಿನಿಯೋಗಿಸುತ್ತೇನೆ ಎಂಬ ಸಂಕಲ್ಪವನ್ನು ಮಕ್ಕಳು ಮಾಡಬೇಕು. ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಂಡ ಮೇಲೆ ಟಿವಿಯನ್ನು ಎಷ್ಟು ಬೇಕಾದರೂ ನೋಡಬಹುದು. ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಪೋಷಕರು ಮಾಡುತ್ತಿರುವ ತ್ಯಾಗವನ್ನು ವಿದ್ಯಾರ್ಥಿಗಳು ಮರೆಯಬಾರದು’ ಎಂದರು.
‘ನಾಯಕ ಸಮಾಜದವರು ಒಗ್ಗಟ್ಟಿನಿಂದ ಮುನ್ನುಗ್ಗಬೇಕು’ ಎಂದು ಹೇಳಿದರು.
ಸಮಾಜದ ಮುಖಂಡರಾದ ಮಹದೇವಸ್ವಾಮಿ, ಶಿವಣ್ಣ, ಪ್ರಭಾಕರ, ವೆಂಕಟಯ್ಯ, ರಾಜಶೇಖರ್, ಮರಿಸ್ವಾಮಿ, ಲೋಕೇಶ್, ಪಿಯಾ ಜಗದೀಶ್, ಸಿದ್ದಯ್ಯ, ಮಂಜುನಾಥ್, ಕೆಂಪಣ್ಣ, ಕಡಕೊಳ ಕುಮಾರಸ್ವಾಮಿ, ರಾಘವ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.