
ಮೈಸೂರು: ‘ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಹೇಳಿದರು.
ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ಕೃಷಿ ತಂತ್ರಜ್ಞರ ಸಂಸ್ಥೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ವಿಸ್ತರಣಾ ಶಿಕ್ಷಣ ಘಟಕ, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಕಾಲೇಜಿನ ಸಹಯೋಗದಲ್ಲಿ ತಾಲ್ಲೂಕಿನ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೃಷಿ ಕ್ಷೇತ್ರದ ಸಮಸ್ಯೆಗಳು, ಯಾಂತ್ರೀಕರಣಕ್ಕೆ ಬೇಕಾದ ಸವಲತ್ತು, ರೈತರ ಆರ್ಥಿಕ ಸಬಲತೆ, ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚಿಸುವುದು, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಬೇಕು’ ಎಂದರು.
‘ಎಂಜಿನಿಯರ್‌ಗಳು ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ, ಕೃಷಿಯಲ್ಲಿ ತಾಂತ್ರಿಕ ಜ್ಞಾನ ಪಡೆದವರು ವ್ಯವಸಾಯ ಮಾಡುತ್ತಿಲ್ಲ. ನೈಸರ್ಗಿಕ ಕೃಷಿ ತೋಟಗಾರಿಕೆ ಬೆಳೆಗಳಲ್ಲಿ ಯಶಸ್ಸು ಕಂಡಿದ್ದರೂ ಇತರ ಬೆಳೆಗಳಲ್ಲಿ ಆ ರೀತಿ ಆಗುತ್ತಿಲ್ಲ. ಇದರ ಬಗ್ಗೆಯೂ ಗಮನಹರಿಸಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ಶಿವಕುಮಾರ್ ಮಾತನಾಡಿ, ‘ರೈತರು ನಿತ್ಯ ಸಂಕಷ್ಟ ಎದುರಿಸುತ್ತಾರೆ. ಕೆಲವೊಮ್ಮೆ ಪ್ರಕೃತಿಯೇ ಅವರ ವಿರುದ್ಧ ಇರುತ್ತದೆ. ಬೆಳೆಗೆ ರೋಗಗಳು ಕೂಡ ಕಾಡುತ್ತವೆ. ಪರಿಸ್ಥಿತಿ ಈ ರೀತಿ ಇರುವಾದ ಚೀನಾದಲ್ಲಿ ಇರುವಂತೆ ಸಹಕಾರಿ ಕೃಷಿ ವ್ಯವಸ್ಥೆ ಜಾರಿಗೆ ಬಂದಲ್ಲಿ ಅನುಕೂಲ ಆಗಬಹುದು’ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಕೆ.ಆರ್. ನಟರಾಜ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಕೆ. ನಾಗರಾಜ, ‘ಆತ್ಮ’ ಯೋಜನೆ ಉಪ ನಿರ್ದೇಶಕ ಸಿ. ಸತೀಶ, ಧನಂಜಯ, ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಕೆ.ಆರ್. ರವೀಂದ್ರ, ಎಚ್.ಬಿ. ಮಧುಲತಾ ಪಾಲ್ಗೊಂಡಿದ್ದರು.
ನಂತರ ನೈಸರ್ಗಿಕ ಕೃಷಿ ಕುರಿತು ವಿಜ್ಞಾನಿಗಳು-ರೈತರ ಸಂವಾದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.