ಮೈಸೂರು: ‘ಜಾತಿ ಜನಗಣತಿ ಕುರಿತು ಕಾಂಗ್ರೆಸ್ ಸರ್ಕಾರ ಯು–ಟರ್ನ್ ತೆಗೆದುಕೊಂಡಿರುವುದು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಬಗೆದ ದ್ರೋಹವಾಗಿದೆ’ ಎಂದು ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಒಂದು ದಶಕದಿಂದ ರಾಜ್ಯದ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವರ್ಗಗಳು) ಕಾಯುತ್ತಿದ್ದ ಜಾತಿ ಜನಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಈ ನಿರ್ಲಕ್ಷ ಮತ್ತು ಬೇಜವಾಬ್ದಾರಿ ನಡೆಯನ್ನು ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದ್ದಾರೆ.
‘₹165 ಕೋಟಿ ಸಾರ್ವಜನಿಕ ಹಣ ವ್ಯಯಿಸಿ, 1.6 ಲಕ್ಷ ಸರ್ಕಾರಿ ನೌಕರರು 8 ತಿಂಗಳ ಕಾಲ ಕಠಿಣ ಶ್ರಮಪಟ್ಟು ನಡೆಸಿದ ಜಾತಿ ಸಮೀಕ್ಷೆ ವರದಿಯನ್ನು 2024ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಆದರೆ, ಈಗ ‘ಸರಿಯಾಗಿಲ್ಲ’ ಅಥವಾ ‘ಹಳೆಯದಾಗಿದೆ’ ಎಂಬ ಅಸ್ಪಷ್ಟ ಕಾರಣಗಳನ್ನು ನೀಡಿ ಇಡೀ ವರದಿಯನ್ನು ಕೈಬಿಟ್ಟು, 90 ದಿನಗಳ ಒಳಗೆ ಹೊಸದಾಗಿ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ಘೋಷಿಸಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
‘ಈ ನಿರ್ಧಾರ ಯಾವುದೇ ಸಾಮಾಜಿಕ ನ್ಯಾಯದ ಕಾರಣದಿಂದ ಮಾಡಿದ್ದಲ್ಲ. ಇದು ಸ್ಪಷ್ಟವಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮಾಜಗಳ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲದ ಕೆಲ ಜಾತಿವಾದಿ ನಾಯಕರ ಲಾಬಿಗೆ ಜಗ್ಗಿದ ರಾಜಕೀಯ ತೀರ್ಮಾನವಾಗಿದೆ’ ಎಂದು ಆರೋಪಿಸಿದ್ದಾರೆ.
‘ಈ ಹಿಂದೆ ನಡೆಸಿದ ಸಮೀಕ್ಷಾ ವರದಿ ಎಲ್ಲಿ ಅಡಗಿಸಿಡಲಾಗಿದೆ, ಅದನ್ನು ಜನರ ಮುಂದೆ ಏಕೆ ಮಂಡಿಸಲಿಲ್ಲ, ಈಗ ಹೊಸದಾಗಿ ಘೋಷಿತ ಸಮೀಕ್ಷೆಗೆ ಯಾವ ಪ್ರಮಾಣದ ಪಾರದರ್ಶಕತೆ, ನಿಖರತೆ ಮತ್ತು ನೈಜತೆಯ ಭರವಸೆ ನೀಡಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ಈ ಹಿಂದಿನ ಜಾತಿ ಜನಗಣತಿ ಪ್ರಕ್ರಿಯೆಯು ಹೇಗೆ ವಿಫಲವಾಯಿತು ಎಂಬುದರ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಹಳೆಯ ವರದಿಯನ್ನು ಕೂಡಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.