ADVERTISEMENT

‘ಕಾರ್ಮಿಕ ಸಂಘಟನೆಗಳಲ್ಲೂ ಜಾತಿ ರಾಜಕೀಯ’

ಎಐಟಿಯುಸಿ ಸಂಘಟನೆಯ 106ನೇ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:28 IST
Last Updated 31 ಅಕ್ಟೋಬರ್ 2025, 6:28 IST
ಎಐಟಿಯುಸಿ ಸಂಘಟನೆಯ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಎಚ್‌.ಆರ್‌. ಶೇಷಾದ್ರಿ ಮಾತನಾಡಿದರು. ಎಚ್‌.ಬಿ. ರಾಮಕೃಷ್ಣ, ಎನ್‌.ಕೆ. ದೇವದಾಸ್‌, ಕೆ.ಎಸ್. ರೇವಣ್ಣ, ವೈ. ಮಹದೇವಮ್ಮ, ಕೆ.ಜಿ. ಸೋಮರಾಜೇ ಅರಸ್‌ ಜೊತೆಗಿದ್ದರು – ಪ್ರಜಾವಾಣಿ ಚಿತ್ರ
ಎಐಟಿಯುಸಿ ಸಂಘಟನೆಯ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಎಚ್‌.ಆರ್‌. ಶೇಷಾದ್ರಿ ಮಾತನಾಡಿದರು. ಎಚ್‌.ಬಿ. ರಾಮಕೃಷ್ಣ, ಎನ್‌.ಕೆ. ದೇವದಾಸ್‌, ಕೆ.ಎಸ್. ರೇವಣ್ಣ, ವೈ. ಮಹದೇವಮ್ಮ, ಕೆ.ಜಿ. ಸೋಮರಾಜೇ ಅರಸ್‌ ಜೊತೆಗಿದ್ದರು – ಪ್ರಜಾವಾಣಿ ಚಿತ್ರ   

ಮೈಸೂರು: ‘ ಕಾರ್ಮಿಕ ಸಂಘಟನೆಗಳಲ್ಲೂ ಜಾತಿ ರಾಜಕೀಯ ಜೋರಾಗಿದ್ದು, ಚುನಾವಣೆಗಳ ಸಂದರ್ಭ ಜಾತಿ ನೋಡಿ ಮತ ಹಾಕುವ ಪರಿಪಾಠ ಆರಂಭವಾಗಿದೆ’ ಎಂದು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎಚ್‌.ಆರ್‌. ಶೇಷಾದ್ರಿ ವಿಷಾದಿಸಿದರು.

ನಗರದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಎಐಟಿಯುಸಿ ಸಂಘಟನೆಯ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ಎಲ್ಲಿವರೆಗೂ ಬಂಡವಾಳ ಶಕ್ತಿಗಳು ಪ್ರಪಂಚ ಆಳುತ್ತವೆಯೋ ಅಲ್ಲಿವರೆಗೂ ಶೋಷಣೆ- ದಬ್ಬಾಳಿಕೆ ಇದ್ದೇ ಇರುತ್ತದೆ. ಈ ಮೊದಲು ಕಾರ್ಮಿಕ ಸಮಸ್ಯೆಗಳಿಗೆ ಸರ್ಕಾರಗಳು ಕನಿಷ್ಠ ಸ್ಪಂದನೆ ತೋರುತ್ತಿದ್ದವು. ಆದರೆ ಇಂದು ಸಮಸ್ಯೆಗಳ ಚರ್ಚೆಯ ಬದಲಿಗೆ ಜಾತಿ ಚರ್ಚೆಯೇ ಜೋರಾಗಿದೆ. ಖಾವಿ ಹಾಕಿ ಪೂಜೆ ಮಾಡಬೇಕಾದ ಸ್ವಾಮಿಗಳು ಜಾತಿ ಪರವಾಗಿ ಬೀದಿಗೆ ಇಳಿದಿರುವುದು ಬೇಸರದ ಸಂಗತಿ’ ಎಂದರು.

‘ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಉದ್ದಿಮೆಗಳ ಸ್ಥಾಪನೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ದೇಶಕ್ಕೆ ಮಾದರಿ ಆಗಿದ್ದರು. ಅಂದೇ ಎಚ್ಎಎಲ್, ಭದ್ರಾವತಿ ಕಾರ್ಖಾನೆ, ಸಿಲ್ಕ್ ಫ್ಯಾಕ್ಟರಿ, ಗಂಧದೆಣ್ಣೆ ಕಾರ್ಖಾನೆ ಸ್ಥಾಪನೆ‌ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಸಿದ್ದರು.‌ ಶಿಂಷಾ ವಿದ್ಯುತ್ ಯೋಜನೆ ಆರಂಭಿಸಿದರು. ಅಂದೇ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ್ದರು’ ಎಂದು ಸ್ಮರಿಸಿದರು.

ADVERTISEMENT

‘ ಸ್ವಾತಂತ್ರ್ಯ ನಂತರದಲ್ಲಿ ಅನೇಕ ಕಾರ್ಮಿಕ ಪರ ಕಾನೂನುಗಳು ಬರಲು ಎಐಟಿಯುಸಿ ಹೋರಾಟವೂ ಮುಖ್ಯವಾಗಿದೆ. ಅದರಲ್ಲೂ ಸಾರ್ವಜನಿಕ ಉದ್ಯಮಗಳ ಸ್ಥಾಪನೆಗೆ ಶ್ರಮಿಸಿದೆ. ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಂಡವಾಳಶಾಹಿಗಳ ₹14-15 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡಿದೆ. ಸಾರ್ವಜನಿಕರ ಉಳಿಕೆ- ತೆರಿಗೆಯ ಹಣ ಅದಾನಿ- ಅಂಬಾನಿಗಳ ಪಾಲಾಗುತ್ತಿದೆ’ ಎಂದು ವಿಷಾದಿಸಿದರು. ‌

‘ ರಾಜ್ಯದ ಕೆಎಸ್‌ಐಸಿ, ಎಂಎಸ್ಐಎಲ್ ಸೇರಿ ಕೆಲವೇ ಸಾರ್ವಜನಿಕ ಉದ್ದಿಮೆಗಳು ಲಾಭದಲ್ಲಿದ್ದು, ಅದರಲ್ಲಿನ ನೂರಾರು ಕೋಟಿ ಲಾಭದ ಹಣವನ್ನು ಸರ್ಕಾರ ನಷ್ಟದಲ್ಲಿರುವ ಕಂಪನಿಗಳಿಗೆ ವರ್ಗಾಯಿಸುತ್ತಿರುವುದು ಸರಿಯಲ್ಲ. ತಿ. ನರಸೀಪುರದ ಸಿಲ್ಕ್ ಫ್ಯಾಕ್ಟರಿಯ ಜಾಗವನ್ನು ಕ್ರೀಡಾಂಗಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವುದು ತಪ್ಪು. ಒಂದು ಕಾಲದಲ್ಲಿ 1200 ಕಾರ್ಮಿಕರಿದ್ದ ಈ ಕಾರ್ಖಾನೆಯಲ್ಲಿ ಈಗ 86 ಮಂದಿ ಇದ್ದು, ಯಾವುದಕ್ಕೂ ಹಣ ಇಲ್ಲದಂತೆ ಆಗಿದೆ. ಆದರೆ‌ ಇಲ್ಲಿನ ಮೀಸಲು ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.‌

ಸಂಘಟನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಎಚ್‌.ಬಿ. ರಾಮಕೃಷ್ಣ, ಜಿಲ್ಲಾ ಸಮಿತಿ ಅಧ್ಯಕ್ಷ ಎನ್‌.ಕೆ. ದೇವದಾಸ್‌, ಕಾರ್ಯಾಧ್ಯಕ್ಷ ಕೆ.ಎಸ್. ರೇವಣ್ಣ, ಉಪಾಧ್ಯಕ್ಷೆ ವೈ. ಮಹದೇವಮ್ಮ, ಕಾರ್ಯದರ್ಶಿ ಕೆ.ಜಿ. ಸೋಮರಾಜೇ ಅರಸ್‌ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.