
ಮೈಸೂರು: ಇಲ್ಲಿನ ಕುವೆಂಪುನಗರದ ‘ಎನ್’ ಬ್ಲಾಕ್ ಮುಖ್ಯರಸ್ತೆಯ ‘ಹೋರಿ ಸುಬ್ಬೇಗೌಡ ಬೂಕನಕೆರೆ ಸ್ಮಾರಕ ಬಸ್ ನಿಲ್ದಾಣ’ದಲ್ಲಿ ಭಾನುವಾರ ‘ಆಕಾಶವಾಣಿ’ ಪ್ರಸಾರ ಸೌಲಭ್ಯಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು.
ಆಕಾಶವಾಣಿ ಮೈಸೂರು ಕೇಂದ್ರದ 91ನೇ ವರ್ಷಾಚರಣೆ ಪ್ರಯುಕ್ತ ಕೇಳುಗ ಅಭಿಮಾನಿ ಬೂಕನಕೆರೆ ವಿಜೇಂದ್ರ ಕಲ್ಪಿಸಿರುವ ರೇಡಿಯೊ ವ್ಯವಸ್ಥೆ ಇದಾಗಿದ್ದು, ಸ್ಥಳೀಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯಕ್ರಮಗಳೇನು ಎಂಬುದನ್ನು ಜನಪ್ರತಿನಿಧಿಗಳಿಗೆ ನಾಗರಿಕರೆ ತಿಳಿಸಿಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಬಸ್ ನಿಲ್ದಾಣಗಳಲ್ಲಿ ಹೊಸ ಮಾದರಿಯ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.
‘ಸಮುದ್ಯತಾ’- ಮೈಸೂರು ಆಕಾಶವಾಣಿಯ ಕೇಳುಗರ ಬಳಗದ ಸಕ್ರಿಯ ಸದಸ್ಯರಾಗಿರುವ ವಿಜೇಂದ್ರ ಅವರು, ತಂದೆಯ ಹೆಸರಿನಲ್ಲಿ ನಿಲ್ದಾಣ ಕಟ್ಟಿಸಿದ್ದರು. ಈಗ ವೈಶಿಷ್ಟ್ಯಪೂರ್ಣವಾಗಿ ಸಮಾಜಮುಖಿ ಹೊಸ ಕಾರ್ಯವೊಂದನ್ನು ಮಾಡಿರುವುದು ಅಭಿನಂದನೀಯ’ ಎಂದರು.
ವಿಜೇಂದ್ರ ಮಾತನಾಡಿ, ‘ಚೆಲುವಾಂಬ ಉದ್ಯಾನ ಹಾಗೂ ಪುರಭವನದಲ್ಲಿ ರೇಡಿಯೊ ವ್ಯವಸ್ಥೆ ಇತ್ತು. ಅದೀಗ ಇಲ್ಲದಾಗಿದೆ. ಬಸ್ ನಿಲ್ದಾಣದಲ್ಲಿ ಆರಂಭವಾಗಿದ್ದು ಇದೇ ಮೊದಲು. ನಿಲ್ದಾಣವು ಮೈಸೂರಿನಲ್ಲೇ ಸ್ವಚ್ಛತೆಗೆ ಹೆಸರಾಗಿದ್ದು, ವಾರದಲ್ಲಿ ಎರಡು ದಿನ ನಾನೇ ಸ್ವಚ್ಛಗೊಳಿಸುತ್ತೇನೆ. ಸಮಾಜದ ಋಣ ನಮ್ಮ ಮೇಲಿದ್ದು, ಅಳಿಲು ಸೇವೆಯನ್ನು ಎಲ್ಲರೂ ಮಾಡಬೇಕಿದೆ’ ಎಂದು ಹೇಳಿದರು.
ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ತಾಂತ್ರಿಕ ವಿಭಾಗದ ಸಿ.ರಂಜಿತ್, ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕ ಚೇತನ್, ಸಮುದ್ಯತಾ ಕೇಳುಗರ ಬಳಗದ ಗೋವಿಂದಾಚಾರ್, ಲೇಖಕ ಕಾಳಿಹುಂಡಿ ಶಿವಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.