ADVERTISEMENT

26ರಂದು ಅಖಿಲ ಭಾರತ ಮುಷ್ಕರ

ಬೆಂಬಲ ನೀಡಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:09 IST
Last Updated 22 ನವೆಂಬರ್ 2020, 5:09 IST

ಮೈಸೂರು: ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಹಾಗೂ ಕೃಷಿ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳವತಿಯಿಂದ ನ.26ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಎಐಟಿಯುಸಿ ಮೈಸೂರು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್‌.ಆರ್‌.ಶೇಷಾದ್ರಿ ತಿಳಿಸಿದರು.

ಈ ಮುಷ್ಕರ ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು ಬೆಂಬಲ ನೀಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

‘ಸಂಪತ್ತುಸೃಷ್ಟಿಸುವ ಶ್ರಮಿಕನನ್ನು, ಅನ್ನದಾತ ರೈತನನ್ನು ಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಲ್ಲರೂ ಒಂದಾಗಿ ಖಂಡಿಸಬೇಕು. ಈಗಾಗಲೇ ರೈತ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಕೈ ಜೋಡಿಸಿವೆ. ಅಲ್ಲದೇ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆ, ಸಂಸ್ಥೆಗಳ ನೌಕರರು, ಗುತ್ತಿಗೆ ಕಾರ್ಮಿಕರು, ಬಿಸಿಯೂಟ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಆಟೊ, ಟ್ಯಾಕ್ಸಿ ಚಾಲಕರು ಬೆಂಬಲ ವ್ಯಕ್ತಪಡಿಸುವುದಾಗಿ ಮುಂದೆ ಬಂದಿದ್ದಾರೆ’ ಎಂದರು.

ADVERTISEMENT

‘ಅಂದು ಪುರಭವನದ ಮುಂದೆ ಸೇರಲು ಕಾರ್ಮಿಕ ಸಂಘಟನೆಗಳ ಸದಸ್ಯರಿಗೆ ಸೂಚನೆ ನೀಡಿದ್ದೇವೆ. ಸಾರ್ವಜನಿಕ ಸಭೆ ನಡೆಸಲು ಪೊಲೀಸರ ಅನುಮತಿ ಕೇಳಿದ್ದೇವೆ. ಆದರೆ, ಕೋವಿಡ್‌ ಕಾರಣ ನೀಡಿ ಅನುಮತಿ ನೀಡಲು ಹಿಂದೇಟು ಹಾಕಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಯನ್ನೂ ಭೇಟಿಯಾಗಿ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ಎಚ್ಚರಿಕೆ ಗಂಟೆ: ಹಲವಾರು ದಲಿತ ಸಂಘಟನೆಗಳುಮುಷ್ಕರವನ್ನು ಬೆಂಬಲಿಸಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಈ ಮುಷ್ಕರ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಯರಾಂ, ಚಂದ್ರಶೇಖರ್ ಮೇಟಿ, ಸುನಿಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.