ADVERTISEMENT

ವಿಷ್ಣು ಸ್ಮಾರಕ ಉದ್ಘಾಟನೆಗೆ ಸಜ್ಜು

ಮುಖ್ಯಮಂತ್ರಿ ಭಾಗಿ, ಅಭಿಮಾನಿಗಳಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:29 IST
Last Updated 28 ಜನವರಿ 2023, 16:29 IST
ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಜ.29ರಂದು ಅನಾವರಣಗೊಳ್ಳಲಿರುವ ವಿಷ್ಣುವರ್ಧನ್ ಪ್ರತಿಮೆಯೊಂದಿಗೆ ಭಾರತಿ ವಿಷ್ಣುವರ್ಧನ್ ಇದ್ದಾರೆ
ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕದಲ್ಲಿ ಜ.29ರಂದು ಅನಾವರಣಗೊಳ್ಳಲಿರುವ ವಿಷ್ಣುವರ್ಧನ್ ಪ್ರತಿಮೆಯೊಂದಿಗೆ ಭಾರತಿ ವಿಷ್ಣುವರ್ಧನ್ ಇದ್ದಾರೆ   

ಮೈಸೂರು: ತಾಲ್ಲೂಕಿನ ಉದ್ಬೂರು ಗೇಟ್ ಸಮೀಪದ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಖ್ಯಾತ ಚಲನಚಿತ್ರ ನಟ ವಿಷ್ಣುವರ್ಧನ್ ಸ್ಮಾರಕದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ವಿಷ್ಣುವರ್ಧನ್‌ ಪತ್ನಿ ಭಾರತಿ ಮತ್ತು ಕುಟುಂಬದವರು ಭಾಗವಹಿಸಲಿದ್ದಾರೆ. ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮುನ್ನಾ ದಿನವಾದ ಭಾನುವಾರವೂ ಅಭಿಮಾನಿಗಳು ಸ್ಮಾರಕ ಕಣ್ತುಂಬಿಕೊಳ್ಳಲು ಬಂದಿದ್ದರು. ಕಾರ್ಯಕ್ರಮಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದ್ದು, ಸ್ಮಾರಕದ ಕಟ್ಟಡಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ನಾಲ್ಕು ದಶಕಗಳ ಕಾಲ ನಿರಂತರವಾಗಿ 200ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದ ಮತ್ತು ಅಭಿಮಾನಿಗಳ ಪಾಲಿನ ‘ಸಾಹಸ ಸಿಂಹ’ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅವರ ಕೊಡುಗೆಯ ಸ್ಮರಣೆಗಾಗಿ ಸರ್ಕಾರವು 5 ಎಕರೆ ಜಾಗವನ್ನು ನಿಗದಿಪಡಿಸಿ ₹ 11 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿದೆ. ಕರ್ನಾಟಕ ರಾಜ್ಯ ವಿಷ್ಣುವರ್ಧನ್ ಪ್ರತಿಷ್ಠಾನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪೋಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ADVERTISEMENT

ಸ್ಮಾರಕ ಭವನವು ವಿಷ್ಣು ನಟಿಸಿರುವ ಚಲನಚಿತ್ರ ಹಾಗೂ ಅವರ ಜೀವನಚರಿತ್ರೆಯ 676 ಫೋಟೊಗಳನ್ನು ಒಳಗೊಂಡ ಗ್ಯಾಲರಿ ಒಳಗೊಂಡಿದೆ. ಸೆಲ್ಫಿ ಸ್ಪಾಟ್, ವಿಷ್ಣುವರ್ಧನ್ ಪ್ರತಿಮೆ, ಥಿಯೇಟರ್‌ ಮೊದಲಾದವುಗಳನ್ನು ಒಳಗೊಂಡಿದೆ.

ಉದ್ಘಾಟನೆ ಅಂಗವಾಗಿ ಸ್ಮಾರಕದ ಬಳಿ ವಿಷ್ಣುವರ್ಧನ್ ಅವರು ಅಭಿನಯಿಸಿದ್ದ ಪಾತ್ರಗಳನ್ನು ಬಿಂಬಿಸುವ ಕಟೌಟ್‌ಗಳನ್ನು ಹಾಕಲಾಗಿದ್ದು, ಗಮನಸೆಳೆಯುತ್ತಿವೆ. ವಿಷ್ಣುವರ್ಧನ್ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಲಾಗುತ್ತದೆ.

ಮೈಸೂರಿನವರೇ ಆದ ವಿಷ್ಣುವರ್ಧನ್ ಮೈಸೂರಿನ ಹೋಟೆಲ್‌ನಲ್ಲಿದ್ದಾಗ ನಿಧನರಾಗಿದ್ದರು. ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆದಿತ್ತು. ಅಭಿಮಾನಿಗಳ ಒತ್ತಾಸೆಯ ಮೇರೆಗೆ ಇಲ್ಲಿ ಸ್ಮಾರಕ ಮೈದಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.