ಹುಣಸೂರು: ತಾಲ್ಲೂಕಿನ ಹಮ್ಮಿಗೆ ಹಾಡಿಯಲ್ಲಿ ಅರಣ್ಯ ಮತ್ತು ಜಮೀನಿಗೆ ಹೋಗಲು ಇದ್ದ ಪಾರಂಪರಿಕೆ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸಲು ಮನವಿ ನೀಡಿದರೂ ಕಂದಾಯ ಇಲಾಖೆ ಕ್ರಮ ಕೈಗೊಂಡಿಲ್ಲಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಆರೋಪಿಸಿದರು.
ಹಮ್ಮಿಗೆ ಹಾಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಬುಡಕಟ್ಟು ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ಗ್ರಾಮದ ಕೆಲ ಮುಖಂಡರು ಗಿರಿಜನರ ಹೊಲ ಮತ್ತು ಅರಣ್ಯಕ್ಕೆ ಹೋಗಿ ಬರುವ ದಾರಿ ಒತ್ತುವರಿ ಮಾಡಿಕೊಂಡು ಸಮುದಾಯದವರಿಗೆ ತೊಂದರೆ ನೀಡುತ್ತಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿಸಿಲ್ಲ. ಗಿರಿಜನರ ಸಮಸ್ಯೆಗೆ ಸ್ಪಂದಿಸದ ತಾಲ್ಲೂಕು ಕಂದಾಯ ಇಲಾಖೆ ವಿರುದ್ಧ ಧರಣಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಸಂಪರ್ಕ ಕಡಿತ: 30ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದ್ದು, ಈ ಸಂಬಂಧ ಈಗಾಗಲೇ ಸೆಸ್ಕ್‌ಗೆ ಸರ್ಕಾರ ವಿದ್ಯುತ್ ಬಿಲ್ ಭರಿಸುವ ಭರವಸೆ ನೀಡಿದ್ದರೂ ಸೆಸ್ಕ್ ಗಿರಿಜನರ ಮನೆಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಗ್ಯಾರಂಟಿ ಘೋಷಿಸಿ ಎಲ್ಲಾ ನಾಗರಿಕರಿಗೂ ಉಚಿತ ವಿದ್ಯುತ್ ಸೌಲಭ್ಯ ನೀಡಿದ್ದರೂ ಗಿರಿಜನರಿಗೆ ಆ ಭಾಗ್ಯ ಇಲ್ಲವಾಗಿದೆ. ಗಿರಿಜನ ಕಲ್ಯಾಣ ಇಲಾಖೆಗೆ ತಾಲ್ಲೂಕಿನ ಹಾಡಿಗಳ ನಿವಾಸಿಗಳ ಮನೆ ವಿದ್ಯುತ್ ಬಿಲ್ ಪಾವತಿಸುವಂತೆ ಸೂಚನೆ ಇದ್ದರೂ ಈವರೆಗೂ ಕ್ರಮವಹಿಸದೆ ಕತ್ತಲಲ್ಲಿ ಬದುಕು ನಡೆಸುತ್ತಿದ್ದೇವೆ ಎಂದರು.
ಡೀಡ್ ಸಂಸ್ಥೆಯ ನಿರ್ದೇಸಕ ಶ್ರೀಕಾಂತ್ ಮಾತನಾಡಿ, ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಮೈಸೂರಿನ ಎನ್.ಐ.ಇ. ಕಾಲೇಜು ವತಿಯಿಂದ ಕಳೆದ ವರ್ಷ ಸೋಲಾರ್ ಮೈಕ್ರೋಗ್ರಿಡ್ ಸ್ಥಾಪಿಸಿ 70 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇದೇ ರೀತಿ ಹಮ್ಮಿಗೆ ಹಾಡಿಯಲ್ಲೂ ಮೈಕ್ರೋ ಗ್ರಿಡ್ ಸ್ಥಾಪಿಸುವಂತೆ ಮನವಿ ಬಂದಿದ್ದು ಈ ಸಂಬಂಧ ಡೀಡ್ ಚಿಂತನೆ ನಡೆಸಿದೆ ಎಂದರು.
ಮೈಸೂರು ವಿವಿ ಒಳಗೊಳ್ಳುವಿಕೆ ಸಂಶೋಧನಾ ಕೇಂದ್ರದ ಸಹಕಾರದಿಂದ ತಾಲ್ಲೂಕಿನ ಕೊಳವಿಗೆ ಹಾಡಿಯಲ್ಲಿ ಎ.23 ರಂದು ಸರ್ಕಾರಿ ಯೋಜನೆಗಳ ಪರಿಚಯ ಹಾಗೂ ಅದೇ ದಿನ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕರೊಂದಿಗೆ ಡಾ.ನಂಜುಂಡ ಮುಖಂಡತ್ವದಲ್ಲಿ ಆದಿವಾಸಿ ಮುಖಂಡರ ಚರ್ಚೆ ಏರ್ಪಡಿಸಲಾಗಿದೆ ಎಂದರು.
ಸಭೆಯಲ್ಲಿ ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಚ್ಚಿ, ಹರ್ಷ, ಶಿವಣ್ಣ, ಮುನಿರಾಮಯ್ಯ, ದೊಡ್ಡಮಾರಯ್ಯ ಗಂಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.