ADVERTISEMENT

ಕೊರೊನಾ ಗೆದ್ದವರ ಕಥೆಗಳು | ಸದಾ ಪಾಸಿಟಿವ್ ಆಗಿರಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 19:45 IST
Last Updated 5 ಆಗಸ್ಟ್ 2020, 19:45 IST
ಈರಣ್ಣ ಬಡಿಗೇರ
ಈರಣ್ಣ ಬಡಿಗೇರ   

ಯುಪಿಎಸ್‌ಸಿ ಪರೀಕ್ಷೆ: ಕೊರೊನಾ ವೈರಸ್‌ ಸೋಂಕು ಯಾರಿಗೆ, ಹೇಗೆ ತಗುಲುತ್ತದೆ ? ಎಂಬುದೇ ತಿಳಿಯಲ್ಲ. ಸೋಂಕಿನ ಪಾಸಿಟಿವ್‌ ಚಿಂತೆ ಬಿಟ್ಟುಬಿಡಿ. ಸದಾ ಪಾಸಿಟಿವ್ ಆಗಿಯೇ ಆಲೋಚಿಸಿ.

ನಿಮ್ಮ ತಲೆಯಿಂದ ಮೊದಲು ಕೊರೊನಾ ವೈರಸ್‌ನ ಭೀತಿ ತೆಗೆದುಹಾಕಿ. ಇದು ಸಾಯುವ ರೋಗವೂ ಅಲ್ಲ. ಸಾಯುವುದು ಇಲ್ಲ. ಇದೀಗ ಮೃತಪಡುತ್ತಿರುವವರು ಬೇರೆ ಬೇರೆ ಅನಾರೋಗ್ಯ ಸಮಸ್ಯೆ ಹೊಂದಿದವರು. ಅವರಲ್ಲೂ ಗಂಭೀರ ಪರಿಸ್ಥಿತಿಯಲ್ಲಿ ಇರುವವರು.

ಮಾನಸಿಕವಾಗಿ ಸದೃಢರಾಗಿದ್ದರೆ ಕೋವಿಡ್‌–19 ಅನ್ನು ಅರ್ಧ ಗೆದ್ದಂತೆ. ಇನ್ನರ್ಧ ರೋಗವನ್ನು ಆಸ್ಪತ್ರೆಗೆ ದಾಖಲಾಗಿ ಸಂತಸಮಯವಾಗಿ ದೂರ ಮಾಡಿಕೊಳ್ಳಬಹುದು. ವೈದ್ಯರ ಸೂಚನೆ ಪಾಲಿಸಬೇಕಷ್ಟೇ. ಮನೋಬಲವೇ ಔಷಧಿಯಿಲ್ಲದ ರೋಗಕ್ಕೆ ಮದ್ದಾಗಲಿದೆ.

ADVERTISEMENT

ಪಾಸಿಟಿವ್ ಎಂಬುದು ಗೊತ್ತಾದಾಗ ಅಕ್ಕಪಕ್ಕದವರು ಭೀತಿಗೊಳಗಾಗಬಾರದು. ನೆರೆಯವರು ಹೆದರಿದರೆ, ಸೋಂಕಿತ ಇದ್ದಲ್ಲೇ ಅರ್ಧ ಸಾಯುತ್ತಾನೆ. ಇದಕ್ಕೆ ಯಾರೊಬ್ಬರೂ ಅವಕಾಶ ಕೊಡಬಾರದು. ಎಲ್ಲರೂ ಪೀಡಿತರಿಗೆ ಧೈರ್ಯ ತುಂಬಿದರೆ, ದೇಶದಿಂದಲೇ ಕೊರೊನಾ ನಿರ್ಮೂಲನೆಗೊಳಿಸಬಹುದು.

ಕೆಎಸ್‌ಆರ್‌ಟಿಸಿಯ ಮೈಸೂರು ಗ್ರಾಮಾಂತರ ವಿಭಾಗದ ಡಿಪೊದಲ್ಲಿ ನಾನು ಸಹಾಯಕ ಕುಶಲಕರ್ಮಿ. ನನ್ನ ಮನೆಯಿರುವ ಬಿಲ್ಡಿಂಗ್‌ನಲ್ಲಿ ಐದು ಮನೆಗಳಿವೆ. ನಮ್ಮ ಚಾಲಕರೊಬ್ಬರಿಗೆ ಪಾಸಿಟಿವ್ ಬಂತು. ವಿಷಯ ತಿಳಿದೊಡನೆ ಕಚೇರಿಗೆ ಹೋಗಿ ನಾನು ತಪಾಸಣೆಗೊಳಗಾಗುವೆ ಎಂದು ಹೇಳಿದೆ. ಅಧಿಕಾರಿ ಸಮ್ಮತಿಸಿದರು. ಅದರಂತೆ ಗಂಟಲು ದ್ರವದ ಮಾದರಿ ಕೊಟ್ಟೆ.

ನಾಲ್ಕನೇ ದಿನದ ಸಂಜೆ ನನ್ನ ಮೊಬೈಲ್‌ನಲ್ಲಿನ ಆರೋಗ್ಯ ಸೇತು ಆ್ಯಪ್ ನೀವು ಕೊರೊನಾ ಪಾಸಿಟಿವ್ ಎಂಬ ಸೂಚನೆ ನೀಡಿತು. ತಕ್ಷಣವೇ ನನ್ನ ಜೊತೆಯಲ್ಲಿದ್ದ ಭಾವಮೈದುನನಿಗೆ ಪ್ರತ್ಯೇಕವಾಗಿರಲು ಹೇಳಿದೆ. ನಮ್ಮ ಬಿಲ್ಡಿಂಗ್‌ನ ಎಲ್ಲರಿಗೂ ಎಚ್ಚರಿಕೆಯ ಸೂಚನೆ ನೀಡಿದೆ.

ರಾತ್ರಿ 9 ಗಂಟೆಯಾದರೂ ಯಾವೊಂದು ಫೋನ್ ಬರಲಿಲ್ಲ. ಪರಿಚಯಸ್ಥರು ಆ್ಯಪ್‌ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದರು. ನನಗೆ ವಿಶ್ವಾಸವಿತ್ತು. ಎಷ್ಟು ಹೊತ್ತಾದರೂ ಫೋನ್ ಬಾರದಿದ್ದರಿಂದ ನಾನೇ ಆಪ್ತ ಮಿತ್ರ ಸಹಾಯವಾಣಿಗೆ ಫೋನಚ್ಚಿದೆ. ಸಿಬ್ಬಂದಿ ಖುಷಿಪಟ್ಟರು. ಮುನ್ನೆಚ್ಚರಿಕೆಯ ಮಾಹಿತಿ ನೀಡಿ, ಹೊರಗೆ ಹೋಗದೆ ನಿಶ್ಚಿಂತೆಯಿಂದ ಮಲಗಿ ಎಂಬ ಕಿವಿಮಾತು ಹೇಳಿದರು.

ಮರುದಿನ ಬೆಳಿಗ್ಗೆ ಪಾಲಿಕೆಯವರು ಫೋನ್ ಮಾಡಿ, ಸ್ಯಾನಿಟೈಸ್ ಮಾಡುವುದಾಗಿ ಹೇಳಿದರು. ಆರೋಗ್ಯ ಇಲಾಖೆಗೆ ನಾನೇ ಫೋನ್ ಮಾಡಿದೆ. ಸಂಬಂಧಿಸಿದವರು ಖುಷಿಪಟ್ಟರು. ಕರೆದೊಯ್ಯಲು ಬರುವುದಾಗಿ ಹೇಳಿದರು. ಆಂಬುಲೆನ್ಸ್‌ ಬರುವುದರೊಳಗಾಗಿ ಕಿಟ್‌ನೊಂದಿಗೆ ಸಿದ್ಧನಿದ್ದೆ. ಆಸ್ಪತ್ರೆಗೆ ದಾಖಲಾಗಿ ವೈದ್ಯರ ಸೂಚನೆಯಂತೆ ಸಂತಸಮಯವಾಗಿದ್ದು, ಸಂಪೂರ್ಣ ಗುಣಮುಖನಾದೆ.

ಕೋವಿಡ್–19 ಬಗ್ಗೆ ವಿಡಿಯೊ ಮಾಡಿ, ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿ, ಸಮಾಜಕ್ಕೆ ಧನಾತ್ಮಕ ಸಂದೇಶ ನೀಡಿದೆ. ಇದಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಇದೀಗ ಐದು ದಿನದಿಂದ ನನ್ನ ನಿತ್ಯ ಕರ್ತವ್ಯದಲ್ಲಿ ತಲ್ಲೀನನಾಗಿರುವೆ.

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.