ADVERTISEMENT

ಸಾಲಿಗ್ರಾಮ: ಕಾರು ಚಾಲಕನ ಸ್ಮರಣಾರ್ಥ ಆಂಬುಲೆನ್ಸ್‌ ಸೇವೆ ಆರಂಭಿಸಿದ ಉದ್ಯಮಿ

ಸಾ.ರಾ. ನಂದೀಶ್‌ ಅವರಿಂದ ಸೇವಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 18:01 IST
Last Updated 12 ಡಿಸೆಂಬರ್ 2021, 18:01 IST
ಕಾರು ಚಾಲಕ ಚಂದನ್‌ ಸ್ಮರಣಾರ್ಥ ಗರ್ಭಿಣಿಯರ ಅನುಕೂಲಕ್ಕಾಗಿ ಆಂಬುಲೆನ್ಸ್‌ ವಾಹನವನ್ನು ಉದ್ಘಾಟಿಸಲಾಯಿತು. ಅನಿತಾ ಮಹೇಶ್‌, ಸಾ.ರಾ. ನಂದೀಶ್‌ ಹಾಜರಿದ್ದರು
ಕಾರು ಚಾಲಕ ಚಂದನ್‌ ಸ್ಮರಣಾರ್ಥ ಗರ್ಭಿಣಿಯರ ಅನುಕೂಲಕ್ಕಾಗಿ ಆಂಬುಲೆನ್ಸ್‌ ವಾಹನವನ್ನು ಉದ್ಘಾಟಿಸಲಾಯಿತು. ಅನಿತಾ ಮಹೇಶ್‌, ಸಾ.ರಾ. ನಂದೀಶ್‌ ಹಾಜರಿದ್ದರು   

ಸಾಲಿಗ್ರಾಮ: ತಮ್ಮ ಬಳಿ ಕಾರು ಚಾಲಕರಾಗಿದ್ದ ಚಂದನ್‌ ಮೃತಪಟ್ಟಿದ್ದರಿಂದ ಮನನೊಂದ ಉದ್ಯಮಿ ಸಾ.ರಾ.ನಂದೀಶ್‌ ಅವರು ಚಂದನ್‌ ಸ್ಮರಣಾರ್ಥ ಕುಡಿಯುವ ನೀರಿನ ಘಟಕ ನಿರ್ಮಾಣ ಹಾಗೂ ಗರ್ಭಿಣಿಯರಿಗೆ ಉಚಿತ ಆಂಬುಲೆನ್ಸ್‌ ವಾಹನದ ಸೌಲಭ್ಯ ಒದಗಿಸುವ ಮೂಲಕ ಗಮನ ಸೆಳೆದಿದ್ದಾರೆ.

ಪಟ್ಟಣದ ಬಸವೇಶ್ವರ ಬಡಾವಣೆಯ ನಿವಾಸಿ ಲೋಕೇಶ್ ಅವರ ಪುತ್ರ ಚಂದನ್ ಅವರು ಸಾ.ರಾ. ನಂದೀಶ್‌ ಬಳಿ ಕಾರು ಚಾಲಕರಾಗಿದ್ದರು. ಚಂದನ್‌ ಈಚೆಗೆ ನಿಧನರಾಗಿದ್ದರು. ಇದರಿಂದ ಆಘಾತಕ್ಕೆ ಒಳಗಾದ ನಂದೀಶ್‌ ಅವರು, ಚಂದನ್ ವಾಸ ಮಾಡುತ್ತಿದ್ದ ಬಡಾವಣೆ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕೊಳವೆಬಾವಿ ಕೊರೆಸಿದ್ದಾರೆ. ಜತೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನೂ ಸ್ಥಾಪಿಸಿದ್ದಾರೆ. ಮಿರ್ಲೆ ಹಾಗೂ ಸಾಲಿಗ್ರಾಮ ಹೋಬಳಿ ವ್ಯಾಪ್ತಿಯ ಗರ್ಭಿಣಿಯರಿಗಾಗಿ ಆಂಬುಲೆನ್ಸ್‌ ವಾಹನದ ವ್ಯವಸ್ಥೆ ಮಾಡಿದ್ದು, ಈ ಸೇವೆಗಳನ್ನು ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಮಹೇಶ್ ಲೋಕಾರ್ಪಣೆ ಮಾಡಿದರು.

‘ಚಂದನ್‌ ಕೇವಲ ಚಾಲಕನಾಗಿರಲಿಲ್ಲ. ಮನೆಯ ಮಗನಂತಿದ್ದ. ಅವನ ಅಗಲಿಕೆ ನಮ್ಮ ಕುಟುಂಬಕ್ಕೆ ಸಂಕಟ ತಂದಿದೆ. ಇದನ್ನು ಮರೆಯಲು ಸಾಧ್ಯವಿಲ್ಲ. ಜನರಿಗೆ ಮೂಲ ಸೌಲಭ್ಯ ಒದಗಿಸುವ ಮೂಲಕ ಅವನ ಜೀವಂತಿಕೆಯನ್ನು ಕಾಣಲು ಈ ಕಾರ್ಯಕ್ಕೆ ಮುಂದಾಗಿರುವೆ’ ಎಂದು ಸಾ.ರಾ.ನಂದೀಶ್ ತಿಳಿಸಿದರು.

ADVERTISEMENT

‘ಚಂದನ್ ಸ್ಮರಣಾರ್ಥ ಲೋಕಾರ್ಪಣೆ ಮಾಡಿರುವ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಹೋಗುವ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿ, ಚಂದನ್ ಎಂದು ನಾಮಕರಣ ಮಾಡಿದರೆ ಆ ಪೋಷಕರಿಗೆ ₹25 ಸಾವಿರ ನೀಡುತ್ತೇನೆ’ ಎಂದು ಸಾ.ರಾ.ನಂದೀಶ್ ಹೇಳಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಸುನೀತಾ ನಂದೀಶ್, ಚಂದನ್ ತಂದೆ ಲೋಕೇಶ್, ತಾಯಿ ಸುಲೋಚನಾ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷೆ ಸುಧಾ ರೇವಣ್ಣ, ವಿಎಸ್ಎಸ್ಎನ್ ಅಧ್ಯಕ್ಷ ಪಾಪಣ್ಣ, ಎಸ್.ಎಂ.ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.