ADVERTISEMENT

ಮೈಸೂರು | ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಟ ಅಗತ್ಯ– ಸತೀಶ್ ಜವರೇಗೌಡ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:10 IST
Last Updated 13 ಫೆಬ್ರುವರಿ 2026, 6:10 IST
ಮೈಸೂರು ತಾಲ್ಲೂಕು ದೊಡ್ಡಕಾನ್ಯದ ಸ.ಹಿ.ಪ್ರಾ. ಶಾಲೆ ಆವರಣದಲ್ಲಿ ಜಯಲಕ್ಷ್ಮೀಪುರಂನ ಕುವೆಂಪು ಪ್ರಥಮ ದರ್ಜೆ ಕಾಲೇಜಿನಿಂದ ವಾರ್ಷಿಕ ವಿಶೇಷ ಶಿಬಿರ ನಡೆಯಿತು
ಮೈಸೂರು ತಾಲ್ಲೂಕು ದೊಡ್ಡಕಾನ್ಯದ ಸ.ಹಿ.ಪ್ರಾ. ಶಾಲೆ ಆವರಣದಲ್ಲಿ ಜಯಲಕ್ಷ್ಮೀಪುರಂನ ಕುವೆಂಪು ಪ್ರಥಮ ದರ್ಜೆ ಕಾಲೇಜಿನಿಂದ ವಾರ್ಷಿಕ ವಿಶೇಷ ಶಿಬಿರ ನಡೆಯಿತು   

ಮೈಸೂರು: ‘ಸಮಾಜದ ಪ್ರಗತಿಗೆ ಬಹು ದೊಡ್ಡ ತೊಡಕಾಗಿರುವ ಹಾಗೂ ಜನರನ್ನು ಕಾಡುತ್ತಿರುವ ಭ್ರಷ್ಟಾಚಾರದ ಪಿಡುಗು ನಿರ್ಮೂಲನೆಗೆ ಯುವಜನರು ಮತ್ತು ವಿದ್ಯಾರ್ಥಿಗಳು ಸಂಘಟಿತ ಹೋರಾಟ ನಡೆಸಬೇಕು’ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಸಲಹೆ ನೀಡಿದರು.

ತಾಲ್ಲೂಕಿನ ದೊಡ್ಡಕಾನ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ಹಾಗೂ ಜಯಲಕ್ಷ್ಮೀಪುರಂನ ಕುವೆಂಪು ಪ್ರಥಮ ದರ್ಜೆ ಕಾಲೇಜಿನಿಂದ ಈಚೆಗೆ ಹಮ್ಮಿಕೊಂಡಿದ್ದ ‘ಯೂತ್ ಫಾರ್ ಮೈ ಭಾರತ್’ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

‘ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಜಾತೀಯತೆ, ಧರ್ಮಾಂಧತೆ, ಭ್ರಷ್ಟಾಚಾರ ಪ್ರಮುಖವಾಗಿವೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಜನರ ನೆಮ್ಮದಿ ಹಾಳಾಗುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

‘ಸರ್ಕಾರಿ ಅಧಿಕಾರಿ ಅಥವಾ ನೌಕರ ಸಕಾಲಕ್ಕೆ ನ್ಯಾಯಯುತವಾದ ಕೆಲಸ ಮಾಡಿಕೊಡದಿದ್ದರೆ, ನಿರ್ಲಕ್ಷ್ಯ ತೋರಿದರೆ, ಲಂಚ ಕೇಳಿದರೆ ಲೋಕಾಯುಕ್ತಕ್ಕೆ ದೂರು ಕೊಡಬೇಕು’ ಎಂದು ಸಲಹೆ ನೀಡಿದರು.

ಸ್ವಜನ್ಯ ಕಲಾ ವೇದಿಕೆಯ ಅಧ್ಯಕ್ಷ ಎಸ್. ಶಿಶಿರಂಜನ್, ‘ಶಿಕ್ಷಣವು ವಿದ್ಯಾರ್ಥಿಗಳನ್ನು ಅಕ್ಷರಸ್ಥರನ್ನಾಗಿ, ಬುದ್ಧಿವಂತರನ್ನಾಗಿ ಮಾಡಿದರೆ, ಎನ್‌ಎಸ್‌ಎಸ್‌ ಶಿಬಿರಗಳು ಸಾಮಾಜಿಕ ಪ್ರಜ್ಞೆ, ಸೇವಾ ಮನೋಭಾವ ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿವೆ’ ಎಂದರು.

ಎನ್ಎಸ್‌ಎಸ್ ಶಿಬಿರಾಧಿಕಾರಿ ಎಸ್. ಆನಂದ್,  ಸಹ ಶಿಬಿರಾಧಿಕಾರಿಗಳಾದ ಎಂ.ಆರ್. ಮೇಘನಾ ಮತ್ತು ಬಿ.ಎಸ್. ಆಶಾ, ಉಪನ್ಯಾಸಕ ಧರ್ಮೇಂದ್ರ, ತಿ.ನರಸೀಪುರ ವಿದ್ಯೋದಯ ಕಾಲೇಜಿನ ಗ್ರಂಥಪಾಲಕ ಶಿವಮೂರ್ತಿ, ಗ್ರಾಮದ ಮುಖಂಡರಾದ ಮಹದೇವಪ್ಪ, ವಿವೇಕಾನಂದ, ಮಲ್ಕಣ್ಣ, ಶಿವಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.