ADVERTISEMENT

ಯಾರ‍್ಯಾರೋ ಸಿಎಂ ಗಾದಿ ಕೇಳುತ್ತಿದ್ದಾರೆ: ಡಿಕೆಶಿಗೆ ಮಹದೇವಪ್ಪ ಪರೋಕ್ಷ ಟಾಂಗ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 12:19 IST
Last Updated 20 ಜುಲೈ 2022, 12:19 IST
ಎಚ್‌.ಸಿ. ಮಹದೇವಪ್ಪ
ಎಚ್‌.ಸಿ. ಮಹದೇವಪ್ಪ   

ಮೈಸೂರು: ‘ಯಾರ‍್ಯಾರೋ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಆ ಹುದ್ದೆ ಎಂದರೆ ಎಲ್ಲರಿಗೂ ಹಗುರವಾಗಿ ಹೋಗಿದೆ’ ಎಂದು ವಿಧಾನಸಭೆಯ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ. ಮಹದೇವಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಆ ಹುದ್ದೆಯ ಗೌರವ ಬೇರೆಯೇ ಇದೆ. ಹೋರಾಟ, ಸಾಮಾಜಿಕ ಬದ್ಧತೆ, ರಾಜಕೀಯ ಜೀವನದ ಅನುಭವ ಎಲ್ಲವೂ ಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆಗಳಿದ್ದರೂ ಅದನ್ನು ಹಗುರವಾಗಿ ಯಾರೂ ಕಾಣುತ್ತಿಲ್ಲ. ಬೇರೆ ಪಕ್ಷಗಳಲ್ಲಿ ಆ ಹುದ್ದೆಯ ಬಗ್ಗೆ ಬಹಳ ಹಗುರವಾಗಿ ಮಾತನಾಡಲಾಗುತ್ತಿದೆ. ಎಲ್ಲದಕ್ಕೂ ಮೊದಲು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು 130 ಸೀಟುಗಳನ್ನು ಪಡೆಯಬೇಕು. ನಂತರ ಶಾಸಕರು ಮತ್ತು ಹೈಕಮಾಂಡ್‌ನವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀರ್ಮಾನಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಪಕ್ಷ ಅವಕಾಶ ನೀಡಿದರೆ ಜವಾಬ್ದಾರಿ ನಿರ್ವಹಿಸಲು ನಾನೂ ಸಿದ್ಧವಿದ್ದೇನೆ’ ಎಂದು ಪರೋಕ್ಷವಾಗಿ ಆಕಾಂಕ್ಷಿ ಎಂಬುದನ್ನು ಬಹಿರಂಗಪಡಿಸಿದರು. ‘ಲೋಕೋಪಯೋಗಿ, ಆರೋಗ್ಯ ಖಾತೆ ಸೇರಿದಂತೆ ಹಲವು ಜವಾಬ್ದಾರಿ ನಿರ್ವಹಿಸಿದ್ದೇನೆ. ನನಗೂ ಸಾಕಷ್ಟು ಅನುಭವವಿದೆ. ಅವಕಾಶ ಸಿಕ್ಕರೆ ನಿಭಾಯಿಸುತ್ತೇನೆ’ ಎಂದು ತಿಳಿಸಿದರು.

‘ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮವನ್ನಷ್ಟೆ ನಾವು ಮಾಡುತ್ತಿದ್ದೇವೆ. ‘ಸಿದ್ದರಾಮೋತ್ಸವ’ ಎಂದು ನಾವ್ಯಾರೂ ಕರೆದಿಲ್ಲ. ಕೆಲವು ಮಾಧ್ಯಮದವರು ಹಾಗೂ ಯಾರೋ ಅಭಿಮಾನಿಗಳು ಸಿದ್ದರಾಮೋತ್ಸವ ಎಂದು ಹೆಸರಿಸಿದ್ದಾರೆ. ದೊರೆ, ರಾಜ ಎಂಬಿತ್ಯಾದಿ ಪದಗಳನ್ನು ಪ್ರಜಾಪ್ರಭುತ್ವದಲ್ಲಿ ಬಳಸಬಾರದು. ಬಳಸಬೇಡಿ ಎಂದು ಹೇಳಬೇಕಾದವರೆ ಬಳಸಿದರೆ ನಾವೇನು ಮಾಡುವುದು?’ ಎಂದು ಕೇಳಿದರು.

‘ಸಿದ್ದರಾಮಯ್ಯ ಅಮೃತ ಮಹೋತ್ಸವವನ್ನು ಮುಖ್ಯಮಂತ್ರಿ ಹುದ್ದೆ ಕೇಳುವುದಕ್ಕೆ ಮಾಡುತ್ತಿಲ್ಲ. ಹುಟ್ಟುಹಬ್ಬ ಅಥವಾ ಸಮಾರಂಭಗಳ ಮೂಲಕ ಆ ಹುದ್ದೆ ಕೇಳಲಾಗುವುದಿಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ತಮ್ಮ ದುರಾಡಳಿತವನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಟೀಕಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.