ADVERTISEMENT

ಶೀಘ್ರದಲ್ಲೇ ಕುಲಪತಿ ನೇಮಕ

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 14:17 IST
Last Updated 13 ಜುಲೈ 2018, 14:17 IST

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಹಲವು ತಿಂಗಳುಗಳಿಂದ ಖಾಲಿಯಿದ್ದು, ಶೀಘ್ರದಲ್ಲೇ ನೇಮಕ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ವಿಶೇಷ ಪೂಜೆ ಸಲ್ಲಿಸಲು ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರ ಜತೆ ಮಾತನಾಡಿದರು.ಕರ್ನಾಟಕ ರಾಜ್ಯ ಮುಕ್ತ ವಿ.ವಿ ಮಾನ್ಯತೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ. 10 ಸಾವಿರ ಅತಿಥಿ ಉಪನ್ಯಾಸಕರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದರು.

‘ನಾನು ಕಂದಾಯ ಸಚಿವ ಸ್ಥಾನಕ್ಕೆ ಪಟ್ಟುಹಿಡಿದದ್ದು ನಿಜ. ಆದರೆ ಅದು ಕಾಂಗ್ರೆಸ್‌ ಪಾಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಿದರು. ಈ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದನ್ನು 15 ದಿನಗಳಲ್ಲೇ ತಿಳಿದುಕೊಂಡಿದ್ದೇನೆ’ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಹೆಚ್ಚಿನ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ಬಾರಿಯ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು. ವಿಶೇಷ ಪೂಜೆ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರಕ್ಕೆ ಬಂದ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಕುಟುಂಬ ಸದಸ್ಯರೊಂದಿಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಚಿವರು ಚಾಮುಂಡಿ ಬೆಟ್ಟಕ್ಕೆ ಬಂದಾಗ ಅವರ ಬೆಂಬಲಿಗರು ದೇವಾಲಯದ ಮುಂಭಾಗದಲ್ಲಿ 101 ಈಡುಗಾಯಿ ಒಡೆದು ಹರಕೆ ತೀರಿಸಿದರು. ಹುಟ್ಟೂರು ಗುಂಗ್ರಾಲ್ ಛತ್ರದಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿದ ಅವರು ಉತ್ತನಹಳ್ಳಿ ಮಾರಮ್ಮನ ದೇವಸ್ಥಾನ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ, ತಗಡೂರಿನ ಅಂಕನಾಥೇಶ್ವರ ದೇವಸ್ಥಾನಗಳಲ್ಲೂ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.