
ಮೈಸೂರು: ಮಂಡ್ಯದಲ್ಲಿ 500 ಕೋಟಿ ವೆಚ್ಚದಲ್ಲಿ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ( ಎಆರ್ ಎಐ) ಸಂಶೋಧನಾ ಕೇಂದ್ರ ತೆರೆಯಲು ಉದ್ದೇಶಿಸಿದ್ದು, ಇದಕ್ಕೆ 100 ಎಕರೆ ಭೂಮಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
' ಅಂತರರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಕೇಂದ್ರ ಇದಾಗಿದೆ. ಸೂಕ್ತ ಜಮೀನು ಗುರುತಿಸುವಂತೆ ರಾಜ್ಯ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು ಜನವರಿ 21 ರಂದು ಕಂದಾಯ ಇಲಾಖೆ ಅಧಿಕಾರಿಗಳು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದಾರೆ' ಎಂದು ಅವರು ಭಾನುವಾರ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿದರು.
' ಕೇಂದ್ರ ಸರ್ಕಾರವು ಕರ್ನಾಟಕವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ 4500-5000 ಕೋಟಿ ಅನುದಾನ ನೀಡಲಾಗುತ್ತಿದೆ. ಎಚ್ ಎಂಟಿ ಪುನಶ್ಚೇತನಕ್ಕೆ ಮುಂದಾದರೆ, ಭೂಮಿ ತನ್ನದೆಂದು ಅರಣ್ಯ ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ' ಎಂದು ಟೀಕಿಸಿದರು.
' ಕುದುರೆಮುಖದಲ್ಲಿ ಅದಿರು ತೆಗೆಯಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ' ಎಂದು ದೂರಿದ ಅವರು ' ನಾನು ಕೇಂದ್ರ ಸಚಿವನಾಗಿ ಒಂದೂವರೆ ವರ್ಷ ಕಳೆದರೂ ಈವರೆಗೆ ರಾಜ್ಯದ ಒಬ್ಬ ಸಚಿವ ನನ್ನನ್ನು ಭೇಟಿ ಮಾಡಿ ಚರ್ಚಿಸಿಲ್ಲ. ಮೊದಲು ಕೇಂದ್ರದ ಜೊತೆ ಒಳ್ಳೆಯ ಸಂಬಂಧ ಬೆಳೆಸಿ ಯೋಜನೆ ಪಡೆಯಲು ಪ್ರಯತ್ನಿಸಿ. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ. ಎಲ್ಲಕ್ಕೂ ಕೇಂದ್ರಕ್ಕೆ ಬೆಟ್ಟು ಮಾಡುವುದಾದರೆ ರಾಜ್ಯ ಸರ್ಕಾರ ಏಕೆ ಬೇಕು?' ಎಂದು ಪ್ರಶ್ನಿಸಿದರು.
' ಸದ್ಯ ರಾಜ್ಯದ ರಾಜಕೀಯ ವಾತಾವರಣ ನೋಡಿದರೆ ನಾನು ಇಲ್ಲಿರಬೇಕಿತ್ತು ಎನಿಸುತ್ತಿದೆ. ಸಮಯ ಬಂದಾಗ ಬರುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.