ADVERTISEMENT

ಎಚ್.ಡಿ.ಕೋಟೆ: ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ

ಬೆಳೆ ತೀವ್ರ ನಷ್ಟವುಂಟಾಗುವ ಭಯದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 4:38 IST
Last Updated 10 ಅಕ್ಟೋಬರ್ 2025, 4:38 IST
ಸೈನಿಕ ಹುಳು ಬಾಧೆ ಕಾಣಿಸಿಕೊಂಡ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದ ರೈತ ಮಂಜುನಾಥ ಅವರ ಮುಸುಕಿನ ಜೋಳದ ಹೊಲವನ್ನು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್‌ ಪರಿಶೀಲಿಸಿದರು
ಸೈನಿಕ ಹುಳು ಬಾಧೆ ಕಾಣಿಸಿಕೊಂಡ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದ ರೈತ ಮಂಜುನಾಥ ಅವರ ಮುಸುಕಿನ ಜೋಳದ ಹೊಲವನ್ನು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್‌ ಪರಿಶೀಲಿಸಿದರು   

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ತಡ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಮುಸುಕಿನ ಜೋಳಕ್ಕೆ ಅಲ್ಲಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ. ಇದರಿಂದ ರೈತರು ಬೆಳೆ ನಷ್ಟದ ಭಯದಲ್ಲಿದ್ದಾರೆ.

‘ಈ ವರ್ಷ ಮುಂಗಾರು ತೀವ್ರ ಮಳೆಯಿಂದಾಗಿ ಬೆಳೆ ಕೈಗೆ ಸಿಗಲಿಲ್ಲ. ತಡ ಮುಂಗಾರು ಹಂಗಾಮಿನಲ್ಲಿ ಬೆಳೆ ರೋಗಬಾಧೆಗೆ ಸಿಲುಕಿದೆ. ಸಾಲ ಮಾಡಿ ಬೆಳೆದ ಬೆಳೆ ಕೈಗೆ ಸಿಗುವ ಹಂತದಲ್ಲಿ ತೀವ್ರ ನಷ್ಟವುಂಟಾಗುತ್ತಿದೆ. ಇದರಿಂದ ರೈತರು ಸಾಲದ ಸುಳಿಗೆ ಸಿಲುಕುವ ಸ್ಥಿತಿ ಉಂಟಾಗಿದೆ’ ಎಂದು ತಾಲ್ಲೂಕಿನ ಕೋಳಗಾಲ ಗ್ರಾಮದ ಮಂಜುನಾಥ ‘ಪ್ರಜಾವಾಣಿ’ಗೆ ವಿವರಿಸಿದರು.  

ಸೈನಿಕ ಹುಳು ಬಾಧೆ ಕುರಿತು ಯಾವುದೇ ಸಂಶಯ ಕಂಡುಬಂದಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿನ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

ಸೈನಿಕ ಹುಳುವಿನ ಜೀವನಚಕ್ರ: 

ಮರಿಹುಳು ಹಸಿರು ಬಣ್ಣದಲ್ಲಿದ್ದು ತಲೆಯ ಮೇಲ್ಭಾಗದಲ್ಲಿ ತಲೆಕೆಳಗಾದ ‘ಙ’ ಚಿಹ್ನೆಯನ್ನು ಹೊಂದಿರುತ್ತದೆ. ಉದರದ 8 ಮತ್ತು 9ನೇ ಭಾಗದಲ್ಲಿ ನಾಲ್ಕು ಉಬ್ಬಿದ ಕಪ್ಪು ಚುಕ್ಕೆಗಳು ಚೌಕಾರದ ರೀತಿಯಲ್ಲಿ ಕಂಡುಬರುತ್ತದೆ. ಒಂದೂವರೆ ಇಂಚು ಉದ್ದದ ಹುಳುಗಳು ಪತಂಗಗಳಾಗಿ ಸಾವಿರಾರು ಸಂಖ್ಯೆಯಲ್ಲಿ ಆಹಾರ ಹುಡುಕಿಕೊಂಡು ಬಹಳ ದೂರ ಸಾಗಿ, ಗಿಡಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ.

ಒಂದು ಹೆಣ್ಣು ಪತಂಗ ಸರಾಸರಿ 150ರಿಂದ 200 ಹಸಿರು ಮಿಶ್ರಿತ ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತವೆ. 4ರಿಂದ 5 ದಿನಗಳ ನಂತರ ಮೊಟ್ಟೆ ಒಡೆದು ಮರಿಗಳು ಹೊರಬಂದು 18 ರಿಂದ 28 ದಿನಗಳವರೆಗೆ ಬೆಳೆಗಳಿಗೆ ಹಾನಿ ಮಾಡುತ್ತವೆ. 7ರಿಂದ 17 ದಿನಗಳಲ್ಲಿ ಮಣ್ಣಿನಲ್ಲಿ ಕೋಶಾವಸ್ಥೆಯಲ್ಲಿರುತ್ತವೆ. ಒಟ್ಟು 30ರಿಂದ 45 ದಿನಗಳಲ್ಲಿ ಸೈನಿಕ ಹುಳು ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ.

ಈ ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ನಡುವೆ ಮತ್ತು ಗರಿಗಳ ತಳ ಭಾಗದಲ್ಲಿ ವಾಸಿಸುತ್ತವೆ. ಸಂಜೆ ವೇಳೆ ಹುಳುಗಳು ಚಟುವಟಿಕೆ ಪ್ರಾರಂಭಿಸಿ ಬೆಳೆಯ ಎಲೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಕಾಣಸಿಗುತ್ತವೆ.

ಸೈನಿಕ ಹುಳು ಬಾದೆ ಕಾಣಿಸಿಕೊಂಡಿರುವ ಮುಸುಕಿನ ಜೋಳದಬೆಳೆ
ಬಿತ್ತನೆಯಿಂದ ಹಿಡಿದು 20-25 ದಿನದ ಬೆಳೆ ಇದ್ದು ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು ರೈತರು ಈ ಪೀಡೆಯ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಪ್ರ
ಸಾದ್‌ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ

ಹತೋಟಿ ಕ್ರಮ 

*ಸ್ಪೋಡೋಪ್ಟೆರಾ ಪ್ರೂಜಿಪರ್ಡಾ ಫೆರಮೋನ್ ಟ್ರಾಪ್ (ಮೋಹಕ ಬಲೆಗಳು)- 8 ರಂತೆ ಪ್ರತಿ ಎಕರೆಗೆ ಬಿತ್ತನೆಯಾದ ಒಂದು ವಾರದಿಂದ ತೆನೆಯ ಹಂತದವರೆಗೆ ಅಳವಡಿಸಬೇಕು. ಮೋಹಕ ಬಲೆಯ ರಾಸಾಯನಿಕವನ್ನು ಪ್ರತಿ 20 ದಿನಗಳಿಗೊಮ್ಮೆ ಬದಲಾಯಿಸುವುದು.

*ತತ್ತಿನಾಶಕ ಕೀಟನಾಶಕವಾದ ಥೈಯೋಡಿಕಾರ್ಬ್ 75ಡಬ್ಲೂ. ಪಿ.(ಲಾರ್ವಿನ್) (1 ಗ್ರಾಂ./ಲೀಟರ್) ಗರಿಗಳ ಮೇಲ್ಭಾಗ ಮೊಟ್ಟೆಗಳ ಗುಂಪು ಕಂಡುಬoದಾಗ ಸಿಂಪಡಿಸುವುದು.

*ಆರ್ಥಿಕ ನಷ್ಟ ರೇಖೆಗೆ ಅನುಗುಣವಾಗಿ ಇಮಾಮೆಕ್ಟೆನ್ ಬೆಂಜೋಯೇಟ್ ಶೇ 5 ರಷ್ಟು ಎಸ್.ಜಿ. 0.6 ಗ್ರಾಂ/ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.

*ಪೀಡೆ ಬಾಧೆ ಹೆಚ್ಚಾದಾಗ ರಸಾಯನಿಕ ಕೀಟನಾಶಕಗಳಾದ ನೊವಲ್ಯೂರಾನ್

*ಇಮಾಮೆಕ್ಟಿನ್ ಬೆಂಜೋಯೇಟ್ (ಬ್ಯಾರಾಜೈಡ್) 3 ಮಿ.ಲೀ/ಲೀಟರ್ ಅಥವಾ ಸ್ಪೆನೋಡೋರಮ್ ಶೇ11.7ರಷ್ಟು ಎಸ್.ಪಿ.  0.5ಮಿಲಿ/ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.