ADVERTISEMENT

ಮೈಸೂರು | ಚಿತ್ರಕಲಾ ಶಿಬಿರ: ಪುಟಾಣಿಗಳ ಕಲ್ಪನೆಗಳಿಗೆ ರೂಪರೇಖೆ

ಮೋಹನ್‌ ಕುಮಾರ್‌ ಸಿ.
Published 16 ಏಪ್ರಿಲ್ 2025, 6:35 IST
Last Updated 16 ಏಪ್ರಿಲ್ 2025, 6:35 IST
ಮೈಸೂರಿನ ಜೆಎಸ್‌ಎಸ್‌ ಬಾಲಜಗತ್ ಶಾಲೆಯಲ್ಲಿ ನಡೆಯುತ್ತಿರುವ ಚಿತ್ರಕಲಾ ಶಿಬಿರದಲ್ಲಿ ಚಿಣ್ಣರು
ಮೈಸೂರಿನ ಜೆಎಸ್‌ಎಸ್‌ ಬಾಲಜಗತ್ ಶಾಲೆಯಲ್ಲಿ ನಡೆಯುತ್ತಿರುವ ಚಿತ್ರಕಲಾ ಶಿಬಿರದಲ್ಲಿ ಚಿಣ್ಣರು   

ಮೈಸೂರು: ಪುಟಾಣಿಗಳ ಮನದಲ್ಲಿ ಮೂಡಿದ ಕಲ್ಪನೆಗಳಿಗೆ ಅಂಗೈ ಬೆರಳುಗಳು ರೂಪರೇಖೆ ನೀಡುತ್ತಿದ್ದವು.. ಮೆಚ್ಚಿನ ಚಿತ್ರಕಲಾ ಶಿಕ್ಷಕರ ‍ಪ್ರೋತ್ಸಾಹದ ಮಾತುಗಳಿಗೆ ಮಕ್ಕಳ ಚಿತ್ತಭಿತ್ತಿಯು ಬಿಳಿಹಾಳೆಯಲ್ಲಿ ಒಡಮೂಡುತ್ತಿತ್ತು.

ಜೆಎಸ್‌ಎಸ್‌ ಬಾಲಜಗತ್‌ ಶಾಲೆಯ ಆವರಣದಲ್ಲಿ ‘ಜೆಎಸ್‌ಎಸ್‌ ವಿದ್ಯಾಪೀಠ’ವು ಆಯೋಜಿಸಿರುವ 16ನೇ ಚಿತ್ರಕಲಾ ಶಿಬಿರದಲ್ಲಿ ಮಕ್ಕಳ ಬಣ್ಣದ ಮಾತುಗಳು ಚಿತ್ರಪಟಗಳಲ್ಲಿ ಇನಿದನಿಯಾಗಿ ಪಿಸುಗುಡುತ್ತಿದ್ದವು. ನೋಡಿದವರ ಎದೆಯಲ್ಲಿ ಅಚ್ಚರಿಯ ಜೊತೆಗೆ, ‘ಈ ಎಳೆಯರಲ್ಲಿ ಪ್ರಬುದ್ಧ ಪ್ರತಿಭೆ ಎಷ್ಟಿದೆ’ ಎಂಬುದನ್ನು ಲೆಕ್ಕಹಾಕುವಂತಿತ್ತು.

ಸ್ಮರಣ ಚಿತ್ರಣ, ಸರಳಗೈ ಚಿತ್ರಣ, ಅಕ್ಷರ ಲೇಖನ, ನಿಸರ್ಗ ಚಿತ್ರಣ, ನಕ್ಷಾ ಚಿತ್ರಣ, ವಸ್ತು ಚಿತ್ರಣ, ಗಾಜಿನ ಮೇಲೆ ಅರಳಿದ ಚಿತ್ರಗಳು, ಬಟ್ಟೆಯ ಮೇಲೆ ಮೂಡಿದ ಚಿತ್ತಾರಗಳು, ಕ್ಲೇ ಮಾಡೆಲಿಂಗ್, ಕಸದಿಂದ ತಯಾರಿಸಿದ ಮಾದರಿಗಳು, ಮುಖವಾಡಗಳನ್ನು ನೋಡಿದ ಪೋಷಕರು, ‘ನಮ್ಮ ಮಕ್ಕಳು ಹೀಗೆ ಬರೆದರೆ?’ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು. 

ADVERTISEMENT

ಶುಭಾಶಯ ಪತ್ರ, ಕಾಗದ ಕಲೆ ತಯಾರಿ ತಿಳಿಸುತ್ತಲೇ ಸಂಸ್ಥೆಯ ಚಿತ್ರಕಲಾ ಶಿಕ್ಷಕರೂ ಸ್ವಾವಲಂಬಿತನದ ಪಾಠವನ್ನು ಹೇಳಿಕೊಡುತ್ತಿದ್ದರು. ಚಿಕ್ಕ ಶುಭಾಶಯ ಪತ್ರಗಳ (ಗ್ರೀಟಿಂಗ್ ಕಾರ್ಡ್) ರಾಶಿಯು ಪ್ರಿಂಟ್‌ ಮಾಡಿದ ಕಾರ್ಡ್‌ಗಳಿಗೆ ಸರಿಸಾಟಿಯಾಗಿದ್ದವು.

ಕಳೆದ 4 ವರ್ಷದಿಂದ ಶಿಬಿರದಲ್ಲಿ ಹಾಜರಾಗುತ್ತಿರುವ ಬೋಗಾದಿಯ ಲಿಖಿತಾ ತೋರಿದ ಗಾಜಿನ ಮೇಲೆ ಬರೆದಿದ್ದ ‘ಹುಲಿ’ಯ ಚಿತ್ರ ಹುಬ್ಬೇರಿಸುವಂತಿತ್ತು. ಮಗಳ ಚಿತ್ರಗಳಿಗೆ ತಾಯಿ ಶಶಿಕಲಾ ಅವರೂ ಸಂಭ್ರಮಿಸಿದರು.

‘‍ಪ್ರತಿ ಮಗುವಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಇಷ್ಟದ ಚಿತ್ರಕಲಾ ಮಾದರಿಯನ್ನೂ ಹೇಳಿಕೊಡಲಾಗುತ್ತಿದೆ’ ಎಂದು ಪೋಷಕರಾದ ಭಾಸ್ಕರ್‌ ಹೇಳಿದರು.

8 ಮಂದಿ ಶಿಕ್ಷಕರು: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಜೆಎಸ್‌ಎಸ್‌ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 8 ಮಂದಿ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಚಿತ್ರ ಚಿತ್ರಕಲೆ ಕಲಿಸುತ್ತಿದ್ದಾರೆ. ಏ.2ರಿಂದ ಶಿಬಿರವು ಆರಂಭವಾಗಿದ್ದು, ಇದೇ 22ರಂದು ಸಮಾರೋಪಗೊಳ್ಳಲಿದೆ. ಮಕ್ಕಳು ಬರೆದ ಚಿತ್ರಗಳ ಪ್ರದರ್ಶನವೂ ನಡೆಯಲಿದೆ.

4ನೇ ತರಗತಿವರೆಗೂ ಒಂದು ವಿಭಾಗ, 5ರಿಂದ 7ನೇ ತರಗತಿ ಹಾಗೂ 8ನೇ ತರಗತಿ ಮೇಲ್ಪಟ್ಟವರಿಗೆ ಮೂರು ವಿಭಾಗಗಳಿದ್ದು, ಉತ್ತಮ ಕಲಾಕೃತಿ ಬರೆದವರಿಗೆ ₹ 500, ₹ 400 ಹಾಗೂ ₹ 300 ನಗದು ಬಹುಮಾನವೂ ಇರಲಿದೆ. ಒಂದು ದಿನದ ಚಿತ್ರಕಲಾ ಪ್ರವಾಸಕ್ಕೂ ಶಿಕ್ಷಕರು ಕರೆದೊಯ್ಯಲಿದ್ದಾರೆ. 

ಚಿತ್ರ ಬರೆಯುತ್ತಿರುವ ವಿದ್ಯಾರ್ಥಿಗಳು 
ಶಾಲೆಯ ತರಗತಿಗಳಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಚಿತ್ರಕಲಾ ಪಾಠ ಇರುತ್ತದೆ. ಇಲ್ಲಿ ಪೇಂಟಿಂಗ್‌ ಡ್ರಾಯಿಂಗ್ ಶೇಡಿಂಗ್‌ ಕಲಿತಿರುವೆ. ನಿಸರ್ಗ ಚಿತ್ರಣವೆಂದರೆ ಇಷ್ಟ
ನಮನ್‌ ಈಸ್ಟ್‌ವೆಸ್ಟ್ ಶಾಲೆ
4 ವರ್ಷದಿಂದ ಬರುತ್ತಿರುವೆ. ಪ್ರತಿ ಬಾರಿಯೂ ಹೊಸತನ್ನು ಹೇಳಿಕೊಡುತ್ತಿದ್ದಾರೆ. ಎಲ್ಲ ಬಗೆಯ ಪೇಂಟಿಂಗ್ ಮಾಡುವೆ
ಲಿಖಿತಾ ಎಸ್‌ಡಿಎಂ ಕಾಲೇಜು
ಟಿ.ವಿ ಮೊಬೈಲ್ ಗೇಮ್‌ಗಳ ಬದಲು ಇಂಥ ಶಿಬಿರದಲ್ಲಿ ‍ಪಾಲ್ಗೊಂಡರೆ ಒಳ್ಳೆಯ ಬೆಳವಣಿಗೆ ಆಗುತ್ತದೆ. ಮಗಳು ನಿನಾದಗಿದು 2ನೇ ಶಿಬಿರ
ಕಾಂತರಾಜು ಪೋಷಕರು
‘ಏಕಾಗ್ರತೆ ಕೌಶಲ ಸಿದ್ಧಿಸುತ್ತದೆ’
‘2006ರಲ್ಲಿ ಶಿಬಿರ ಆರಂಭಿಸಲಾಯಿತು. ಕೋವಿಡ್‌ ಕಾರಣ ಎರಡು ವರ್ಷ ಮಾಡಿರಲಿಲ್ಲ. ಆರಂಭದಲ್ಲಿ 25 ಮಕ್ಕಳಿದ್ದರು ಇದೀಗ 85 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಚಿತ್ರಕಲೆ ಬರೆಯುವಾಗ ಏಕಾಗ್ರತೆ ಜೊತೆಗೆ ಕೌಶಲವೂ ಸಿದ್ಧಿಸುತ್ತದೆ’ ಎಂದು ಶಿಬಿರದ ಸಂಚಾಲಕ ಎಸ್‌.ಎಂ.ಜಂಬುಕೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು. ‘1978ರಲ್ಲಿ ಕಾವಾ ವಿದ್ಯಾರ್ಥಿಗಳು ಮೈಸೂರಿನ ಕಲಾವಿದರು ಸೇರಿ ಚಿತ್ರಕಲಾ ಸಂಘ ಮಾಡಿಕೊಂಡಿದ್ದೆವು. ರಾಜೇಂದ್ರ ಸ್ವಾಮೀಜಿ ಅವರಿದ್ದಾಗ ಬಾಲಜಗತ್‌ನಲ್ಲಿಯೇ ಶಿಬಿರ ಆರಂಭಿಸಿ 1984ರವರೆಗೆ ನಡೆಸಿದ್ದೆವು. ಕಾರಣಾಂತರ ನಿಂತಿತ್ತು. ನಂತರ ಮತ್ತೆ ಆರಂಭಿಸಲಾಯಿತು’ ಎಂದು ನೆನೆಪಿಸಿಕೊಂಡರು. ‘ಜೆಎಸ್‌ಎಸ್‌ ಸಂಸ್ಥೆಯ ಚಿತ್ರಕಲಾ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅಕ್ರಿಲಿಕ್‌ ಪೇಂಟಿಂಗ್ ಬಟ್ಟೆಯ ಮೇಲಿನ ಎಂಬೋಸಿಂಗ್‌ ಪೇಟಿಂಗ್‌ ಮೊದಲಾದ ಪ್ರಕಾರಗಳನ್ನು ಕಲಿಸುತ್ತಿದ್ದಾರೆ. ಉಳಿದ ಬೇಸಿಗೆ ಶಿಬಿರಗಳಲ್ಲಿ ನಟನೆ ಅಭಿನಯ ಸಂಗೀತ ಚಿತ್ರಕಲೆ ಎಲ್ಲವನ್ನೂ ಕಲಿಸಲಾಗುತ್ತದೆ. ಇಲ್ಲಿ ಚಿತ್ರಕಲೆ ಮಾತ್ರವೇ ಕಲಿಸುವುದರಿಂದ ನುರಿತವರಾಗುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.