ADVERTISEMENT

ರಂಗಾಯಣ: ಐವರು ಕಲಾವಿದರ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 14:01 IST
Last Updated 29 ಜೂನ್ 2022, 14:01 IST

ಮೈಸೂರು: ಇಲ್ಲಿನ ರಂಗಾಯಣದ ಐವರು ಕಲಾವಿದರನ್ನು ರಾಜ್ಯದ ಇತರ ರಂಗಾಯಣಗಳಿಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ಗೀತಾ ಎಂ.ಎಸ್. ಹಾಗೂ ಕೃಷ್ಣಕುಮಾರ್ ನಾರ್ಣಕಜೆ ಅವರನ್ನು ಕಾರ್ಕಳದ ಯಕ್ಷ ರಂಗಾಯಣ, ನಂದಿನಿ ಕೆ.ಆರ್.–ಶಿವಮೊಗ್ಗ, ಬಿ.ಎನ್. ಶಶಿಕಲಾ–ದಾವಣಗೆರೆ (ವೃತ್ತಿ ರಂಗಾಯಣ) ಹಾಗೂ ಮಹದೇವ–ಕುಲಬುರಗಿ ರಂಗಾಯಣಕ್ಕೆ ವರ್ಗಾಯಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಜೂನ್‌ 22ರಂದು ಆದೇಶಿಸಿದ್ದಾರೆ. ಆದೇಶದಲ್ಲಿ, ಮಹದೇವ ಅವರ ಹೆಸರಿನ ಮುಂದೆ ಅಶಿಸ್ತಿನ ವಿಚಾರಣೆಗೆ ಒಳಪಟ್ಟವರು ಎಂದು ನಮೂದಿಸಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಇಲ್ಲಿ ಕೆಲವೇ ಅನುಭವಿ ಕಲಾವಿದರು ಉಳಿದಂತಾಗಿದೆ.

‘ಐವರು ಹೊಂದಿರುವ ಅಪಾರ ಅನುಭವವು ಇತರ ರಂಗಾಯಣಗಳಿಗೂ ದಕ್ಕಲಿ ಎಂದು ವರ್ಗಾವಣೆ ಮಾಡಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಕ್ರಮವಿದು. ಎಲ್ಲರೂ ಸರಾಸರಿ 32–33 ವರ್ಷ ಅನುಭವ ಹೊಂದಿದ್ದಾರೆ. ಅವರು ಒಂದೇ ಕಡೆ ಇರುವುದರಿಂದ ಏಕತಾನತೆ ಇರುತ್ತದೆ. ಕ್ರಿಯಾಶೀಲವಾಗಿ ಇತರ ಕಡೆಯೂ ಅವರು ತೊಡಗಲೆಂದು ವರ್ಗಾಯಿಸಲಾಗಿದೆ. ಅವರು ಸರ್ಕಾರಿ ನೌಕರರಾದ್ದರಿಂದ ವರ್ಗಾವಣೆ ನಿಯಮಕ್ಕೆ ಹೊರತಾಗಿಲ್ಲ’ ಎಂದು ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ರಂಗಾಯಣ ಅಥವಾ ರಂಗಭೂಮಿಯು ಯಾರನ್ನೂ ನೆಚ್ಚಿಕೊಂಡಿಲ್ಲ. ಅಡ್ಡಂಡ ಕಾರ್ಯಪ್ಪ ಹೋದರೂ ರಂಗಾಯಣದ ಚಟುವಟಿಕೆಗಳು ನಿಲ್ಲುವುದಿಲ್ಲ. ವರ್ಗಾವಣೆಗೆ ಅವರೆಲ್ಲರೂ ಬದ್ಧರಾಗಬೇಕು. ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ. ಅವರಿಗೆ ಸರ್ಕಾರವು ಎಲ್ಲವನ್ನೂ ಸಮೃದ್ಧವಾಗಿಯೇ ಕೊಟ್ಟಿದೆ. ಈಗ ಅವರು ಆದೇಶಕ್ಕೆ ತಲೆಬಾಗಬೇಕಾಗುತ್ತದೆ. ಅವರ ವರ್ಗಾವಣೆಯಿಂದ ರಂಗಾಯಣದ ಚಟುವಟಿಕೆಗಳಿಗೆ ಯಾವ ರೀತಿಯಲ್ಲೂ ವ್ಯತಿರಿಕ್ತ ಪರಿಣಾಮವೂ ಆಗುವುದಿಲ್ಲ; ತೊಂದರೆಯೂ ಆಗುವುದಿಲ್ಲ. ಎಲ್ಲವೂ ಸುಗಮವಾಗಿಯೇ ನಡೆಯುತ್ತವೆ’ ಎಂದು ಅವರು ಹೇಳಿದರು.

ನಿವೃತ್ತಿಗೆ ಕೆಲವೇ ವರ್ಷಗಳಿರುವಾಗ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹಿಂದೆಯೂ ಇಂಥದೊಂದು ಪ್ರಯತ್ನ ನಡೆದಾಗಲೂ ವಿರೋಧ ವ್ಯಕ್ತವಾಗಿತ್ತು. ಹಾಲಿ ನಿರ್ದೇಶಕರ ಧೋರಣೆಯನ್ನು ಪ್ರಶ್ನಿಸಿದ್ದರಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತಿಕ್ರಿಯೆಗೆ ಕಲಾವಿದರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.