ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಹರಿದು ಬಂದರು. ‘ಲಕ್ಷ್ಮಿ’ ಅಲಂಕಾರದಿಂದ ಶೋಭಿಸುತ್ತಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಬೆಟ್ಟದ ಪಾದದಿಂದ ಮೆಟ್ಟಿಲು ಹತ್ತಿದವರಿಗೆ ನೇರ ದರ್ಶನದ ಅವಕಾಶವಿದೆಯೆಂದು ಜಿಲ್ಲಾಡಳಿತ ಹೇಳಿದ್ದರಿಂದ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದಾರಿಯುದ್ದಕ್ಕೂ ಚಾಮುಂಡಿ ತಾಯಿಗೆ ಜಯಘೋಷ ಮೊಳಗಿಸಿದರು.
ಬೆಳಿಗ್ಗೆಯಿಂದಲೇ ಪೂಜೆ:
ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಆರಂಭವಾಯಿತು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಿಗ್ಗೆ 5.20ಕ್ಕೆ ದೇವಿಗೆ ‘ಲಕ್ಷ್ಮಿ’ ಅಲಂಕಾರ ಪೂರ್ಣಗೊಳಿಸಲಾಯಿತು. ನಂತರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಕೆಂಪು– ಬಂಗಾರ ಮಿಶ್ರಿತ ಬಣ್ಣದ ಸೀರೆಯಿಂದ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು. ಉತ್ಸವಮೂರ್ತಿಗೆ ‘ನೀಲಿ’ ಹಾಗೂ ‘ತಿಳಿ ಹಸಿರು’ ಬಣ್ಣದ ಅಂಚಿರುವ ಸೀರೆ ಉಡಿಸಿ, ಆಭರಣಗಳಿಂದ ಸಿಂಗರಿಸಲಾಗಿತ್ತು.
ಪುಷ್ಪ ವೈಭವ:
ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇಗುಲದ ಮುಖ್ಯದ್ವಾರದಲ್ಲಿ ‘ಅಮ್ಮ’ ಎಂದು ಹೂವುಗಳಿಂದ ಬರೆಯಲಾಗಿತ್ತು. ಅಕ್ಕಪಕ್ಕದಲ್ಲಿ ಗಂಡಭೇರುಂಡ ಪುಷ್ಪಾಕೃತಿ ಎಲ್ಲರನ್ನು ಆಕರ್ಷಿಸಿತು.
ಗುಲಾಬಿ, ಸೇವಂತಿಗೆ, ಚೆಂಡು ಹೂಗಳಿಂದ ದೇಗುಲದ ನವರಂಗವನ್ನು ಸೋಪಾನದ ಮಾದರಿಯಲ್ಲಿ ಸಿಂಗರಿಸಲಾಗಿತ್ತು. ರಾಜಗೋಪುರದಲ್ಲಿ ‘ಚಂದದ ಚಾಮುಂಡಿ ಅಮ್ಮ’ ಎಂದು ಬರೆಯಲಾಗಿತ್ತು. ₹ 300 ಹಾಗೂ ₹ 2 ಸಾವಿರ ಟಿಕೆಟ್ ಪಡೆದವರಿಗೆ ಪ್ರತ್ಯೇಕ ಸರದಿ ಸಾಲು ಇತ್ತು.
ಖಾಸಗಿ ವಾಹನಗಳಿಗೆ ನಿರ್ಬಂಧ:
ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಎಂದಿನಂತೆ ಜನರು ವಾಹನಗಳನ್ನು ಲಲಿತಮಹಲ್ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್‌ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸಿದರು. ₹ 2 ಸಾವಿರ ಟಿಕೆಟ್ ಪಡೆದವರಿಗೆ ‘ಐರಾವತ’ ಹವಾ ನಿಯಂತ್ರಿತ ಬಸ್ ವ್ಯವಸ್ಥೆ ಮಾಡಿದ್ದರು. ಅವರಿಗೆ ಅರ್ಧ ಲೀಟರ್‌ನ ಕುಡಿಯುವ ನೀರಿನ ಬಾಟಲ್, ಚಾಮುಂಡಿ ತಾಯಿ ವಿಗ್ರಹ, ಕುಂಕುಮ, ಲಾಡು ಇರುವ ಕಿಟ್ ನೀಡಲಾಯಿತು. ಮುತ್ತೈದೆಯರಿಗೆ ಪ್ರಾಧಿಕಾರದಿಂದ ಮಡಿಲಕ್ಕಿ ವಿತರಿಸಲಾಯಿತು.
ಪ್ರಸಾದ ವ್ಯವಸ್ಥೆ ಮೊದಲಿನಂತಿರಲಿಲ್ಲ. ಬಹುಮಹಡಿ ಪಾರ್ಕಿಂಗ್ ಬದಲು ಮಹಿಷ ಪ್ರತಿಮೆಯ ಎಡಭಾಗದಲ್ಲಿನ ಅರಣ್ಯ ಮಾಹಿತಿ ಭವನದ ಬಳಿಯ ಖಾಲಿ ಜಾಗದಲ್ಲಿ ವಿತರಣೆ ನಡೆಯಿತು. ಬೆಳಿಗ್ಗೆ ಕೇಸರಿ ಬಾತ್, ಬಾತ್, ಮೊಸರನ್ನ ನೀಡಲಾಯಿತು. ಮೊದಲು ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡುತ್ತಿತ್ತು. ಬಾಳೆ ಎಲೆಯಲ್ಲಿ ಪಾಯಸದ ಊಟ ಇರುತ್ತಿತ್ತು. ಈ ಬಾರಿ ಪ್ರಾಧಿಕಾರವೇ ಪ್ರಸಾದ ವಿತರಿಸಿತು.
ಕಾಣದ ಪ್ಲಾಸ್ಟಿಕ್:
ಏಕಬಳಕೆಯ ಪ್ಲಾಸ್ಟಿಕ್ ಅನ್ನು ಅರಣ್ಯ ಇಲಾಖೆಯು ನಿಷೇಧಿಸಿದ್ದರಿಂದ ಬೆಟ್ಟದಲ್ಲಿ ಈ ಬಾರಿ ಪ್ಲಾಸ್ಟಿಕ್ ಹಾವಳಿ ಇರಲಿಲ್ಲ. ಬೆಟ್ಟದ ಪಾದದ ಬಳಿಯೇ ಸ್ವಯಂ ಸೇವಕರು ಪ್ಲಾಸ್ಟಿಕ್ ಕೊಂಡೊಯ್ಯುವುದನ್ನು ತಡೆದರು. ಬಳಕೆ ಮಾಡದಂತೆ ಭಿತ್ತಿಪತ್ರ ಹಿಡಿದು ಜಾಗೃತಿ ಮೂಡಿಸಿದರು.
Highlights - ಮುಂಜಾನೆಯಿಂದ ಭಕ್ತರಿಗೆ ದರ್ಶನ ವ್ಯವಸ್ಥೆ ಪುಷ್ಪ ವೈಭವ ಕಣ್ತುಂಬಿಕೊಂಡ ಜನರು ಬ್ಯಾರಿಕೇಡ್: ಉಸಿರುಗಟ್ಟಿಸಿದ ದರ್ಶನ
Cut-off box - ಕಾದ ಜಿಲ್ಲಾಧಿಕಾರಿ ನಡೆದ ಶಿಫಾರಸು ದರ್ಶನ ಪಡೆಯಲು ಯಾವುದೇ ರೀತಿಯ ಪಾಸ್ ವ್ಯವಸ್ಥೆ ಇರುವುದಿಲ್ಲ. ಧರ್ಮದರ್ಶನ ₹ 300 ಹಾಗೂ ₹ 2ಸಾವಿರ ಟಿಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಶಿಫಾರಸು ಪತ್ರಗಳನ್ನೂ ಪರಿಗಣಿಸುವುದಿಲ್ಲ. ಶಿಷ್ಟಾಚಾರದ ವ್ಯಾಪ್ತಿಗೆ ಬರುವವರಿಗೆ ಮಾತ್ರ ಸರ್ಕಾರಿ ವಾಹನದಲ್ಲಿ ಬರಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದರು. ಆದರೆ ಜಿಲ್ಲಾಧಿಕಾರಿ ನಗರ ಪೊಲೀಸ್ ಆಯುಕ್ತರ ಕಾರಿನಲ್ಲೇ ಅವರ ಸ್ನೇಹಿತರು ಸಂಬಂಧಿಕರು ಕುಟುಂಬದವರು ದರ್ಶನ ಪಡೆಯಲು ಕಾರು ಬಳಸಿದ್ದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಕಾದ ಜಿಲ್ಲಾಧಿಕಾರಿ: ವಿಐಪಿಗಳಿಗೆ ನಿಗದಿಗೊಳಿಸಿದ್ದ ದ್ವಾರದ ಬೀಗದ ಕೀ ಇಟ್ಟುಕೊಂಡಿದ್ದ ವ್ಯಕ್ತಿ ಬೇರೆಲ್ಲೋ ಹೋಗಿದ್ದರಿಂದ ಕೆಲಸ ನಿಮಿಷ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಕಾಯಬೇಕಾಯಿತು. ಜನರ ನೂಕುನುಗ್ಗಲಿನ ನಡುವೆ ಸಾಗಿದ ಅವರು ದೇಗಲ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಗೆ ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು. ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Cut-off box - ನಗರದೆಲ್ಲೆಡೆ ಪೂಜೆ ಭಕ್ತರಿಗೆ ಪ್ರಸಾದ ವಿತರಣೆ ನಗರದೆಲ್ಲೆಡೆ ಭಕ್ತರು ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಿದರು. ಕೆ.ಜಿ.ಕೊಪ್ಪಲಿನ ಚಾಮುಂಡೇಶ್ವರಿ ವಿಜಯನಗರದ ಸಪ್ತಮಾತೃಕಾ ಚೌಡೇಶ್ವರಿ ಕುವೆಂಪು ಬಂದಂತಮ್ಮ ಕಾಳಮ್ಮ ದೇಗುಲ ಆರ್.ಟಿ.ನಗರದ ಉರುಕಾತೇಶ್ವರಿ ದೇಗುಲ ಸೇರಿದಂತೆ ಶಕ್ತಿ ದೇವಿಯ ದೇಗುಲಗಳಲ್ಲಿ ನೂರಾರು ಭಕ್ತರು ಪೂಜೆ ಸಲ್ಲಿಸಿದರು. ನಗರ ಬಸ್ ನಿಲ್ದಾಣ ಸಬ್ ಅರ್ಬನ್ ಬಸ್ ನಿಲ್ದಾಣ ಸಮೀಪ ಚಾಮರಾಜ ಮೊಹಲ್ಲಾದ ದಿವಾನ್ಸ್ ರಸ್ತೆ ನಾರಾಯಣಶಾಸ್ತ್ರಿ ರಸ್ತೆ ಶಿವರಾಂಪೇಟೆ ಅಗ್ರಹಾರ ಉದಯಗಿರಿ ತಿಲಕ್ ನಗರ ಕುವೆಂಪುನಗರ ನಂಜುಮಳಿಗೆ ವಿದ್ಯಾರಣ್ಯಪುರಂ ಸೇರಿದಂತೆ ಹಲವೆಡೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಭಕ್ತರು ಪ್ರಸಾದ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.