ADVERTISEMENT

ತೀರ್ಮಾನ ಕೈಗೊಳ್ಳುವವರು ಪ್ರಧಾನಿ, ಸೈನಿಕರಲ್ಲ

ನಗರದಲ್ಲಿ ರ್‍ಯಾಲಿ ನಡೆಸಿದ ಆರ್‌.ಅಶೋಕ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 19:41 IST
Last Updated 16 ಏಪ್ರಿಲ್ 2019, 19:41 IST
ಬಿಜೆಪಿ ಮುಖಂಡ ಆರ್.ಅಶೋಕ್ ಮಂಗಳವಾರ ಮೈಸೂರಿನಲ್ಲಿ ಪಕ್ಷದ ವತಿಯಿಂದ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡರು
ಬಿಜೆಪಿ ಮುಖಂಡ ಆರ್.ಅಶೋಕ್ ಮಂಗಳವಾರ ಮೈಸೂರಿನಲ್ಲಿ ಪಕ್ಷದ ವತಿಯಿಂದ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡರು   

ಮೈಸೂರು: ದೇಶ ರಕ್ಷಣೆಯ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವವರು ಪ್ರಧಾನಿಯೇ ಹೊರತು ಸೈನಿಕರಲ್ಲ ಎಂದು ಬಿಜೆಪಿಯ ರಾಜ್ಯ ಚುನಾವಣಾ ಸಂಯೋಜಕ ಆರ್.ಅಶೋಕ್ ತಿಳಿಸಿದರು.

‘ಸೇನೆಯನ್ನು ರಾಜಕೀಯಕ್ಕೆ ಎಳೆದು ತರಲಾಗುತ್ತಿದೆ ಎಂಬ ಕಾಂಗ್ರೆಸ್‌ ಆರೋಪ ಸತ್ಯಕ್ಕೆ ದೂರ. ನಮ್ಮ ವಾದ ಇಷ್ಟೇ. ಮುಂಬೈನಲ್ಲಿ ನೂರಕ್ಕೂ ಅಧಿಕ ಮಂದಿ ಭಯೋತ್ಪಾದಕರಿಗೆ ಬಲಿಯಾದಾಗ ಪ್ರಧಾನಿ ಅವರು ಅಲ್ಪಸಂಖ್ಯಾತರ ಮತಗಳು ಬರುವುದಿಲ್ಲ ಎಂದು ಪಾಕ್‌ಗೆ ಹೆದರಿ ಸುಮ್ಮನಿದ್ದರು. ಆದರೆ, ಕಾಶ್ಮೀರದಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದಾಗ ಪ್ರಧಾನಿ ಮೋದಿ ಸುಮ್ಮನಿರದೇ ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ಇದನ್ನು ಹೇಳುವುದು ತಪ್ಪೆ’ ಎಂದು ಅವರು ಇಲ್ಲಿ ಸುದ್ದಿಗಾರರನ್ನು ಪ್ರಶ್ನಿಸಿದರು.

ಪಾಕಿಸ್ತಾನದ ಮೇಲಾಗಲಿ, ಚೀನಾದ ಮೇಲಾಗಲಿ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಇರುವುದು ಪ್ರಧಾನಿಗೆ ಮಾತ್ರ. ಈ ಅಧಿಕಾರವನ್ನು ಕಾಂಗ್ರೆಸ್‌ ಬಳಕೆ ಮಾಡಿಲ್ಲ, ಬಿಜೆಪಿ ಸಮರ್ಪಕವಾಗಿ, ಸಕಾಲಿಕವಾಗಿ ಬಳಕೆ ಮಾಡಿದೆ. ಸೈನಿಕರ ಮೇಲಾದ ಆಕ್ರಮಣಕ್ಕೆ ಪ್ರತೀಕಾರವನ್ನು ತೆಗೆದುಕೊಂಡಿದೆ. ಸೈನಿಕರ ತ್ಯಾಗ, ಬಲಿದಾನಗಳ ಮೇಲೆ ಗೌರವ ಇದ್ದುದ್ದರಿಂದಲೇ ಬಿಜೆಪಿ ಈ ಕ್ರಮ ಕೈಗೊಂಡಿತು ಎಂದರು.

ADVERTISEMENT

ಸಿದ್ದರಾಮಯ್ಯ, ಜಿಟಿಡಿ ತಬ್ಬಿಕೊಳ್ಳುವುದರಿಂದ ಏನೂ ಆಗಲ್ಲ:ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಸಚಿವ ಜಿ.ಟಿ.ದೇವೇಗೌಡ ಅವರು ತಬ್ಬಿಕೊಳ್ಳುವುದರಿಂದ ಏನೂ ಆಗುವುದಿಲ್ಲ. ಅವರಿಬ್ಬರು ತಬ್ಬಿಕೊಳ್ಳುವುದೂ ಒಂದೇ ಶಿವಾಜಿ ಮತ್ತು ಅಫ್ಜಲ್‌ಖಾನ್ ತಬ್ಬಿಕೊಳ್ಳುವುದೂ ಒಂದೇ ಎಂದು ಅವರು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಇಲ್ಲಿ 34 ಸಾವಿರ ಲೀಡ್‌ನಿಂದ ಸೋತಿದ್ದಾರೆ. ಅವರು ಇಲ್ಲಿ ಠಿಕಾಣಿ ಹೂಡಿದಷ್ಟೂ ನಮಗೆ ಬರುವ ಮತಗಳ ಅಂತರ ಹೆಚ್ಚಾಗುತ್ತದೆ. ಅವರು ಇಲ್ಲೇ ಇದ್ದರೆ 64 ಸಾವಿರ ಲೀಡ್‌ನಿಂದ ಗೆಲುವು ಸಾಧ್ಯ. ಈ ಸತ್ಯವನ್ನು ಸಿದ್ದರಾಮಯ್ಯ ಅರಿತುಕೊಳ್ಳಬೇಕು’ ಎಂದು ಅವರು ಕುಟುಕಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ವೇದಿಕೆ ಮೇಲಿದ್ದರೂ ಪರಸ್ಪರ ಯಾರನ್ನೂ ನಂಬದ ಸ್ಥಿತಿಯಲ್ಲಿ ನಾಯಕರು ಇದ್ದಾರೆ. ನಾಮಕಾವಸ್ಥೆಗೆ ಒಂದಾದರೆ ಬಿರುಕು ಮಾಯವಾಗುವುದಿಲ್ಲ ಎಂದು ಹೇಳಿದರು.

ನಗರದಲ್ಲಿ ಬಿಜೆಪಿ ರ‍್ಯಾಲಿ: ಬಿಜೆಪಿಯು ಆರ್.ಅಶೋಕ್ ಅವರ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ರ‍್ಯಾಲಿ ನಡೆಸಿತು. ನೂರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಮಹಾತ್ಮ ಗಾಂಧಿ ಚೌಕ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ಡಿ.ದೇವರಾಜಅರಸು ರಸ್ತೆ, ಜೆಎಲ್‌ಬಿ ರಸ್ತೆ ಹಾಗೂ ಶಿವರಾಂಪೇಟೆ ತಲುಪಿತು.

ಶಾಸಕ ನಾಗೇಂದ್ರ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಹಾಗೂ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.