ADVERTISEMENT

ಮೈಸೂರು | ‘20 ಎಕರೆ ಜಾಗ ಸಿಕ್ಕಲ್ಲಿ ಅಶೋಕಪುರಂ ಟೌನ್‌ಶಿಪ್‌ ನಿರ್ಮಾಣ’: ಮಹದೇವಪ್ಪ

ಅಂಬೇಡ್ಕರ್ ಜಯಂತಿ; ಸಮುದಾಯ ಭವನದ ನೂತನ ಸಂಘದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 3:08 IST
Last Updated 4 ಆಗಸ್ಟ್ 2025, 3:08 IST
ಮೈಸೂರಿನ ಅಶೋಕಪುರಂನಲ್ಲಿ ನಡೆದ ಸಮುದಾಯ ಭವನದ ನೂತನ ಸಂಘದ ಉದ್ಘಾಟನೆ, ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುಷ್ಪನಮನ ಸಲ್ಲಿಸಿದರು. ಎಂ.ಕೆ.ಸೋಮಶೇಖರ್, ಪುರುಷೋತ್ತಮ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಅಶೋಕಪುರಂನಲ್ಲಿ ನಡೆದ ಸಮುದಾಯ ಭವನದ ನೂತನ ಸಂಘದ ಉದ್ಘಾಟನೆ, ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುಷ್ಪನಮನ ಸಲ್ಲಿಸಿದರು. ಎಂ.ಕೆ.ಸೋಮಶೇಖರ್, ಪುರುಷೋತ್ತಮ್ ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಅಶೋಕಪುರಂ ಟೌನ್‌ಶಿಪ್‌ ನಿರ್ಮಾಣಕ್ಕೆ 20 ಎಕರೆ ಜಾಗದ ಅವಶ್ಯಕತೆಯಿದ್ದು, ಕ್ರಮವಹಿಸಲಾಗುವುದು. ನಗರದೊಳಗೆ ಅಥವಾ ಹೊರಗೆ ಜಾಗ ಸಿಕ್ಕಲ್ಲಿ ಟೌನ್‌ಶಿಪ್‌ ನಿರ್ಮಿಸಲಾಗುವುದು’ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ನಗರದ ಅಶೋಕಪುರಂನಲ್ಲಿ ಭಾನುವಾರ ನಡೆದ ಉಸ್ತಾದ್ ಚಿಕ್ಕೈದಯ್ಯನ ಬೀದಿಯಲ್ಲಿನ ವಿಶ್ವಮಾನವ ಡಾ.ಬಿ.ಆರ್‌.ಅಂಬೇಡ್ಕರ್ ಸಮುದಾಯ ಭವನದ ನೂತನ ಸಂಘದ ಉದ್ಘಾಟನೆ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿ ವಾಸಿಸುತ್ತಿರುವ ಬಡವರಿಗೆ ಮನೆ ನಿರ್ಮಾಣ ಸೇರಿ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಧಿಕಾರ ಇರುವ ತನಕ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ADVERTISEMENT

‘ಅಶೋಕಪುರಂ ಎಂದರೆ ಸ್ವಾಭಿಮಾನ.‌ ಸುತ್ತಮುತ್ತಲಿನ ಹಳ್ಳಿಗೆ ರಕ್ಷಾ ಕವಚ. ಅದರಂತೆ ದೇಶಕ್ಕೆ ಸಂವಿಧಾನ ರಕ್ಷಾ ಕವಚವಾಗಿದೆ. ಅಂಬೇಡ್ಕರ್ ಮರೆತರೆ ದೇಶಕ್ಕೆ ಉಳಿವಿಲ್ಲ. ಸಂವಿಧಾನ ಅಪಕೀರ್ತಿಗೊಳಿಸಿದರೆ ಅವರಿಗೆ ಉಳಿಗಾಲವಿಲ್ಲ’ ಎಂದರು.

‘ರಾಜಕೀಯ ಅಧಿಕಾರ ಎನ್ನುವುದು ಸಮಸ್ಯೆಗಳ ಬೀಗದ ಕೈ. ಈ ಬೀಗದ ಕೈ ಸರಿಯಾದವರ ಕೈಯಲ್ಲಿ ಇರಬೇಕು. ಇಲ್ಲದಿದ್ದರೆ ಶೋಷಿತರ ಕಾಳಜಿ ಇರುವುದಿಲ್ಲ. ಯಾವ ಅನುಕೂಲವನ್ನು ಕಲ್ಪಿಸುವುದಿಲ್ಲ. ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಗೌರವದಿಂದ ಕಾಣುತ್ತಾರೆ’ ಎಂದು ತಿಳಿಸಿದರು.

‘ಸಂವಿಧಾನ ಪೀಠಿಕೆ ಓದುವುದು ಕಡ್ಡಾಯ ಮಾಡಲಾಗಿದ್ದು, ಅಂಬೇಡ್ಕರ್‌ ಕುರಿತು ಅರಿವು ಮೂಡಿಸಲಾಗಿದೆ. ಇದೊಂದು ಹೊಸ ಕ್ರಾಂತಿಯಾಗಿದೆ. ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದವರು ಇದೀಗ ಸಂವಿಧಾನ ಪೀಠಿಕೆ ಓದುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಅಂಬೇಡ್ಕರ್ 1924ರಲ್ಲಿ ಬಹಿಷ್ಕೃತ ಹಿತಕಾರಿಣಿ ಸಭೆ ಮಾಡಿದರು.‌ ಇದರ ಉದ್ದೇಶ ತುಳಿತಕ್ಕೆ ಒಳಗಾದವರು, ಶೋಷಿತರು, ಅವಕಾಶ ವಂಚಿತರನ್ನು ಸೇರಿಸಿ ಸಂಘಟನೆ ಮಾಡುವುದಾಗಿತ್ತು. ಇದರ ಮೂಲವೇ ಶಿಕ್ಷಣ, ಸಂಘಟನೆ, ಹೋರಾಟ. ಆದರೆ ಇಂದಿಗೂ ನಮ್ಮ ಬದುಕು ಹೋರಾಟದಿಂದ ಕೂಡಿದೆ. ಭಾರತದ ರಾಜಕಾರಣದಲ್ಲಿ ಬದ್ಧತೆ ಇಲ್ಲ’ ಎಂದರು.

‘ಸಂಘದ ಪದಾಧಿಕಾರಿಗಳು ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಮನವಿ ಮಾಡಿದ್ದಾರೆ. ನೀವು ಕೇಳಿದ್ದಕ್ಕಿಂತ ಹೆಚ್ಚಿಗೆ ನೀಡಲಾಗುವುದು. ಅಲ್ಲದೆ, ಅರಸು ರಸ್ತೆಯ ಅಂಬೇಡ್ಕರ್ ಭವನಕ್ಕೆ ಟೆಂಡರ್‌ ಆಗಿದ್ದು, 20 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.

ಅಂಬೇಡ್ಕರ್ ಸಮುದಾಯ ಭವನದ ಅಧ್ಯಕ್ಷ ಎಂ.ದೊಡ್ಡಸಿದ್ದಯ್ಯ, ಆದಿಕರ್ನಾಟಕ ಮಹಾಸಂಸ್ಥೆ ಅಧ್ಯಕ್ಷ ಪಿ.ಸಿದ್ದರಾಜು, ದೊಡ್ಡಗರಡಿ ಅಧ್ಯಕ್ಷ ಅರ್.ಸಿ.ಮಹೇಶ್, ಚಿಕ್ಕಗರಡಿ ಅಧ್ಯಕ್ಷ ಬಿ.ನಾಗರಾಜ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಭುಮೂರ್ತಿ, ಪಲ್ಲವಿ ಬೇಗಂ, ಭುವನೇಶ್ವರಿ, ಮುಖಂಡರಾದ ರವಿ, ಕೃಷ್ಣ ಇದ್ದರು.

‘ವಿದ್ಯಾವಂತರು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಿ’:

‘ವಿದ್ಯಾವಂತರು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕು. ಆರ್‌ಎಸ್‌ಎಸ್‌ ಸಂವಿಧಾನದಲ್ಲಿ ಸಮಾನತೆ ಜಾತ್ಯತೀತತೆ ತೆಗೆದು ಹಾಕಲು ಹೇಳಿರುವುದು ದೊಡ್ಡ ಹುನ್ನಾರವಾಗಿದೆ. ಅಲಿಖಿತ ಸಂವಿಧಾನ ದಬ್ಬಾಳಿಕೆ ನಿರಂತರವಾಗಿ ಹೇರುವ ಕೆಲಸ ಮಾಡಲಾಗುತ್ತಿದೆ’ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ದೂರಿದರು.

ಮಾಜಿ ಮೇಯರ್ ಪುರುಷೋತ್ತಮ ಮಾತನಾಡಿ ‘ಅಂಬೇಡ್ಕರ್ ಆಶಯ ಜಾರಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಸಂವಿಧಾನಕ್ಕೆ ಚ್ಯುತಿ ಬಂದ ಸಂದರ್ಭದಲ್ಲಿ ಯುವಶಕ್ತಿ ಸೈನ್ಯದ ರೀತಿ ಮುನ್ನಗ್ಗಬೇಕು. ನಮ್ಮ ಹಕ್ಕು ಪಡೆಯಲು ಹೋರಾಟವೇ ದಾರಿ. ಇದಕ್ಕಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಜಾಗೃತರಾಗಿ ಸಂಘಟಿತರಾಗಬೇಕು’ ಎಂದರು.

‘ಅಂಬೇಡ್ಕರ್ ಹೆಸರಿನಲ್ಲಿ ವಿವಿಧ ಕಾಲೇಜು ಸೇರಿದಂತೆ ಕೈಗಾರಿಕಾ ಸಂಸ್ಥೆ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸಚಿವರು ಕ್ರಮವಹಿಸಬೇಕು’ ಎಂದು ಕೋರಿದರು. ಶಾಸಕ ಟಿ.ಎಸ್‌.ಶ್ರೀವತ್ಸ ಮಾತನಾಡಿ ‘ಈ ಭಾಗದ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಯುಜಿಡಿ ಡ್ರೈನೇಜ್‌ ಸೇರಿದಂತೆ ಅನೇಕ ಕೆಲಸ ಬಾಕಿಯಿದ್ದು ಶೀಘ್ರದಲ್ಲಿ ನೆರವೇರಿಸಲಾಗುವುದು. ಸಮುದಾಯ ಭವನದ ನವೀಕರಣಕ್ಕೆ ಶಾಸಕರ ನಿಧಿಯಿಂದ ₹20 ಲಕ್ಷ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.