ಮೈಸೂರು: ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಇಲ್ಲಿನ ನಿವಾಸಕ್ಕೆ ಸಗಣಿ ಎರಚಿ ಪ್ರತಿಭಟಿಸಲು ಯತ್ನಿಸಿದ ಶಾಸಕ ಟಿ.ಎಸ್. ಶ್ರೀವತ್ಸ, ನಗರದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.
‘ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದಿದ್ದವರ ವಿರುದ್ಧ ಕ್ರಮವಹಿಸಿಲ್ಲ, ಕೃತ್ಯ ನಡೆದು ಎರಡು ದಿನವಾದರೂ ಸಚಿವರು ಕೆ.ವೆಂಕಟೇಶ್ ಪ್ರತಿಕ್ರಿಯಿಸಿಲ್ಲ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶಾಸಕರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು.
‘ಲಜ್ಜೆಗೇಡಿ ಸರ್ಕಾರಕ್ಕೆ ಧಿಕ್ಕಾರ’, ‘ದೇಶದ್ರೋಹಿ ಸರ್ಕಾರಕ್ಕೆ ಧಿಕ್ಕಾರ’, ‘ಬೇಕೇ ಬೇಕು ನ್ಯಾಯ ಬೇಕು’, ‘ನೀತಿಗೆಟ್ಟ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ವೆಂಕಟೇಶ್‌ಗೆ ಧಿಕ್ಕಾರ’ ಮೊದಲಾದ ಘೋಷಣೆ ಕೂಗಿದರು. ‘ಗೋಮಾತೆಯ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಗೋಣಿ ಚೀಲದಲ್ಲಿ ತಂದಿದ್ದ ಸಗಣಿಯೊಂದಿಗೆ ಸಚಿವರ ಮನೆಯತ್ತ ಸಾಗಿದ ಅವರನ್ನು ಪೊಲೀಸರು ರಸ್ತೆಯಲ್ಲೇ ತಡೆದರು. ಆಗ ಪ್ರತಿಭಟನಾಕಾರರು– ಪೊಲೀಸರ ನಡುವೆ ವಾಗ್ವಾದ ನಡೆಯಿತು. ಕಾರ್ಯಕರ್ತರು ಸಗಣಿಯನ್ನು ರಸ್ತೆಯಲ್ಲೇ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅವರನ್ನು ಪೊಲೀಸರು ವಾಹನಗಳಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ಮಿರ್ಲೆ ಶ್ರೀನಿವಾಸಗೌಡ, ಜೋಗಿ ಮಂಜು, ಜೆ.ಎಸ್. ಜಗದೀಶ್, ಗಿರಿಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.