ADVERTISEMENT

ಜನವರಿಯಿಂದ ಆಟೊರಿಕ್ಷಾ ದರ ಏರಿಕೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:47 IST
Last Updated 13 ನವೆಂಬರ್ 2025, 2:47 IST
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದರು
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿದರು   

ಮೈಸೂರು: ಮುಂದಿನ ಜನವರಿಯಿಂದ ಜಿಲ್ಲೆಯಲ್ಲಿ ಆಟೊರಿಕ್ಷಾ ದರವು ಏರಿಕೆ ಆಗಲಿದೆ.

ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕನಿಷ್ಠ ದರವನ್ನು ₹30ರಿಂದ ₹36ಕ್ಕೆ ಹಾಗೂ ನಂತರದ ಪ್ರತಿ ಕಿ.ಮೀ. ದರವನ್ನು ₹15ರಿಂದ ₹18 ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಈಶ್ವರ್‌ ಚೌಹಾಣ್ ಅವರಿಗೆ ಸೂಚಿಸಿದರು. 

ಸಭೆಯಲ್ಲಿದ್ದ ಆಟೊ, ಚಾಲಕರು ಮತ್ತು ಮಾಲೀಕರ ಸಂಘದ ಸದಸ್ಯರು ಮಾತನಾಡಿ ‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಆಟೊ ದರ ಪರಿಷ್ಕರಣೆ ಮಾಡಿಲ್ಲ. ಆಗಾಗ್ಗೆ ಇಂಧನ ಬೆಲೆ ಏರಿಕೆ ಆಗುತ್ತಲೇ ಇದೆ. ಅಲ್ಲದೆ ರಿಕ್ಷಾ ದುರಸ್ತಿಯೂ ದುಬಾರಿ ಆಗುತ್ತಿದೆ. ದಿನಕ್ಕೆ ₹300–400 ಸಂಪಾದನೆ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ದರ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ‘ಬೆಲೆ ನಿಯಂತ್ರಣ ಪ್ರಾಧಿಕಾರವು ರಾಜ್ಯಕ್ಕೆ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡುತ್ತದೆ. ಅದು ಸಾಕಷ್ಟು ವಿಳಂಬವಾಗುತ್ತದೆ. ಸದ್ಯಕ್ಕೆ ಬೆಂಗಳೂರಿನಲ್ಲಿರುವ ದರದಂತೆ ಜನವರಿಯಿಂದ ಜಾರಿಯಾಗುವಂತೆ ಜಿಲ್ಲೆಯ ಆಟೊ ದರವನ್ನು ಹೆಚ್ಚಿಸಬೇಕು’ ಎಂದು ಸೂಚಿಸಿದರು.

ಬ್ಯಾಡ್ಜ್ ವಿತರಿಸಿ: ‘ವಿಮಾ ಕಂಪನಿಗಳು ಆಟೊ ಚಾಲಕರಿಗೆ ಬ್ಯಾಡ್ಜ್‌ ಇದ್ದರೆ ಮಾತ್ರ ವಿಮಾ ಪಾವತಿಗೆ ಪರಿಗಣಿಸುತ್ತಿವೆ. ಹೀಗಾಗಿ ವಿಶೇಷ ಅಭಿಯಾನದ ಮೂಲಕ ಎಲ್ಲರಿಗೂ ಬ್ಯಾಡ್ಜ್‌ ವಿತರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೊರ ರಾಜ್ಯ ವಾಹನ ತಪಾಸಣೆ: ‘ಮೈಸೂರಿನಲ್ಲಿ ಮಹಾರಾಷ್ಟ್ರ, ಕೇರಳ ಮೂಲದ ಆಟೊಗಳ ಓಡಾಟ ಹೆಚ್ಚಿದೆ. ಕಾನೂನಿನ ಪ್ರಕಾರ ದಾಖಲೆಗಳನ್ನು ನೀಡಿ ವರ್ಗಾವಣೆ ಮಾಡಿಕೊಳ್ಳಬೇಕು. ಈ ನಿಯಮ ಪಾಲನೆ ಮಾಡದೆ ರಿಕ್ಷಾಗಳನ್ನು ಚಾಲನೆ ಮಾಡಲಾಗುತ್ತಿದೆ’ ಎಂಬ ದೂರುಗಳು ಕೇಳಿಬಂದವು.

ಮುಂದಿನ 15 ದಿನಗಳವರೆಗೆ ಹೊರ ರಾಜ್ಯ ವಾಹನಗಳ ತಪಾಸಣೆ ಅಭಿಯಾನ ಆರಂಭಿಸಿ, ದಾಖಲೆಗಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪೂರ್ವ ವಲಯ ಆರ್‌ಟಿಒ ಮಧುರಾ, ಮೈಸೂರು ಆರ್‌ಟಿಒ ಪಶ್ಚಿಮ ರಾಮಚಂದ್ರಪ್ಪ, ಎಆರ್‌ಟಿಒ ನಯಾಜ್‌ ಪಾಷಾ, ಮಂಜುನಾಥ್‌, ಶಿವಕುಮಾರ್‌ ಇದ್ದರು.

- ಪ್ರೀಪೇಯ್ಡ್ ಕೇಂದ್ರ ಹೆಚ್ಚಿಸಲು ಮನವಿ

‘ನಗರದಲ್ಲಿನ ಆಟೊ ಪ್ರೀಪೇಯ್ಡ್ ಕೇಂದ್ರಗಳ ಮೇಲೆ ಒತ್ತಡ ಹೆಚ್ಚಿದ್ದು ಇನ್ನಷ್ಟು ಕಡೆಗಳಲ್ಲಿ ಕೇಂದ್ರಗಳನ್ನು ಆರಂಭಿಸಬೇಕು. ಅಂತಹ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಆಟೊ ಚಾಲಕರು ಮನವಿ ಮಾಡಿದರು. ‘ರಿಂಗ್‌ ರಸ್ತೆಯಿಂದ 8 ಕಿ.ಮೀ. ಆಚೆಗೆ ಆಟೊರಿಕ್ಷಾ ಸೇವೆ ನೀಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡುತ್ತಿಲ್ಲ. ಕೇಳಿದರೆ ನಮಗೆ ಆ ಬಗ್ಗೆ ಸೂಕ್ತ ನಿರ್ದೇಶನ ಬಂದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಸಂಘಟನೆಯ ಪದಾಧಿಕಾರಿಗಳು ದೂರಿದರು. ಸಂಚಾರ ವಿಭಾಗದ ಡಿಸಿಪಿ ಸುಂದರ್‌ರಾಜ್‌ ಪ್ರತಿಕ್ರಿಯಿಸಿ ‘ಈ ಬಗ್ಗೆ ಪೊಲೀಸ್‌ ಸಿಬ್ಬಂದಿಗೆ ಸೂಚನೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.