ADVERTISEMENT

ಸಾಂಕ್ರಾಮಿಕ ರೋಗ ತಡೆಗೆ ಜಾಗೃತಿ ಮಂತ್ರ

ನೇಸರ ಕಾಡನಕುಪ್ಪೆ
Published 17 ಮೇ 2019, 19:47 IST
Last Updated 17 ಮೇ 2019, 19:47 IST

ನೇಸರ ಕಾಡನಕುಪ್ಪೆ

ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗುತ್ತಿರುವ ಕಾಲವಿದು. ಈ ಬೇಸಿಗೆ– ಮಳೆಗಾಲದ ಮಧ್ಯ ಕಾಲದಲ್ಲೇ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ವೈರಸ್, ಬ್ಯಾಕ್ಟೀರಿಯಾ, ಕ್ರಿಮಿ ಕೀಟಗಳಿಗೆ ಹಬ್ಬದ ವಾತಾವರಣ. ಡೆಂಗಿ, ಮಲೇರಿಯಾ ಕೀಟಗಳಿಂದ ಹರಡಿದರೆ, ಹೊಟ್ಟೆ ನೋವು, ವಾಂತಿ, ಭೇದಿ, ಶೀತ, ಜ್ವರ ಸೂಕ್ಷ್ಮಾಣು ಜೀವಿಗಳಿಂದ ಹರಡುತ್ತವೆ. ಈ ರೋಗಗಳನ್ನು ಹತ್ತಿ‌ಕ್ಕಲು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಸಜ್ಜಾಗಿವೆ.

ರೋಗ ತಡೆಗೆ ಕ್ರಮ ವಹಿಸುವುದು ಮಾತ್ರ ಮುಖ್ಯವಲ್ಲ. ರೋಗ ತಡೆಗೆ ಜಾಗೃತಿಯೇ ಮೂಲ ಆಯುಧ ಎಂಬ ಮಂತ್ರವನ್ನು ಸಾರಿವೆ. ಮನೆ ಮನೆಗೂ ತೆರಳಿ ಸ್ವಚ್ಛತೆಯ ಪಾಠ ಹೇಳುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಿ ಅರಿವು ಮೂಡಿಸುವ ಪ್ರಯತ್ನ ಮೈಸೂರಿನಲ್ಲಿ ಗಂಭೀರವಾಗಿ ನಡೆದಿದೆ.

ಸ್ವಚ್ಛತೆ ನಿಯಂತ್ರಣಕ್ಕೆ ಆದ್ಯತೆ: ಮಳೆಗಾಲ ಶುರುವಾಗುತ್ತಿರುವಂತೆ ಎಚ್ಚೆತ್ತುಕೊಂಡಿರುವ ನಗರಪಾಲಿಕೆ, ನೀರು ನಿಲ್ಲದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿರ್ವಹಿಸಿದರೆ. ನೀರು ನಿಲ್ಲುವ ತೆರೆದ ತೊಟ್ಟಿಗಳು, ಕಟ್ಟಡ ನಿರ್ಮಾಣ ಪ್ರದೇಶಗಳು, ಗುಂಡಿಗಳು, ತೆರೆದ ಚರಂಡಿಗಳನ್ನು ಶುಚಿಗೊಳಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ, ನೀರು ನಿಲ್ಲಿಸುವುದನ್ನು ತಪ್ಪಿಸಲಾಗದ ಜಾಗಗಳಲ್ಲಿ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಾಡಿದೆ.

ಈ ಕಾಲದಲ್ಲಿ ಬಹುಮುಖ್ಯವಾಗಿ ಹರಡುವ ಕಾಯಿಲೆಗಳೆಂದರೆ, ಡೆಂಗಿ ಹಾಗೂ ಮಲೇರಿಯಾ. ಇವೆರಡೂ ಕಾಯಿಲೆಗಳು ಸೊಳ್ಳೆಗಳಿಂದಲೇ ಹರಡುವುದು. ಸೊಳ್ಳೆಗಳು ಮೊಟ್ಟೆಯಿಟ್ಟು ಮರಿ ಮಾಡುವುದು ನಿಂತ ನೀರಿನಲ್ಲೇ. ನೀರು ಎರಡು ದಿನಗಳಿಗಿಂತ ಹೆಚ್ಚಿನ ಕಾಲ ನಿಂತರೆ ಮೊಟ್ಟೆಗಳು ಬಲಿತು ಮರಿಗಳಾಗಿ ಹೊರಬರುತ್ತವೆ. ಹಾಗಾಗಿ, ನಿಂತ ನೀರು ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಈ ಬಗ್ಗೆ ನಗರಪಾಲಿಕೆ ಮುಂಜಾಗೃತಾ ಕ್ರಮ ವಹಿಸಿದೆ. ಇದಕ್ಕೆ ತನ್ನ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸದರೆ ಸಾಲದು ಎಂಬುದನ್ನು ಅರಿತುಕೊಂಡು ಸಾರ್ವಜನಿಕರಿಗೂ ಸಹಕಾರಕ್ಕೆ ಮನವಿ ಮಾಡಿದೆ.

ಮನೆ ಬಳಿಯ ಚರಂಡಿಗಳು, ನೀರಿನ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ನೀರಿನ ಕ್ಯೂರಿಂಗ್ ಮಾಡುವುದಿದ್ದರೆ ಕಡ್ಡಾಯವಾಗಿ 1 ದಿನದ ನಂತರ ನೀರು ಬದಲಿಸುವಂತೆ ಕಿವಿಮಾತು ಹೇಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹಸಿರು ಹೆಚ್ಚಿರುವ ಪ್ರದೇಶಗಳಲ್ಲಿ ಸೊಳ್ಳೆಗಳ ಚಟುವಟಿಕೆ ಹೆಚ್ಚಿರುವ ಕಾರಣ, ಅಲ್ಲಿ ಧೂಮೀಕರಣ ಮಾಡಿದೆ. ಕೀಟ ನಿಯಂತ್ರಣವೇ ರೋಗ ತಡೆಗೆ ಮೊದಲ ಹೆಜ್ಜೆ. ಹಾಗಾಗಿ, ಈ ಕ್ರಮಗಳು ಅತ್ಯಗತ್ಯವಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೀದಿಬದಿ ಮಾರಾಟಗಾರರಿಗೆ ಮನವಿ: ರೋಗ ಹರಡುವ ಇನ್ನೊಂದು ಮಾಧ್ಯಮವೆಂದರೆ ರಸ್ತೆಬದಿ ಮಾರಾಟಗಾರರು. ಈ ಕಾಲದಲ್ಲಿ ಹಣ್ಣುಗಳ ಬಳಕೆ ಬಗ್ಗೆ ಎಚ್ಚರದಿಂದ ಇರಬೇಕು. ಈ ಕಾಲದಲ್ಲಿ ಹಣ್ಣುಗಳಲ್ಲಿ ಫಂಗಸ್ ಹೆಚ್ಚು ಬೇಗನೇ ಬೆಳೆದುಕೊಳ್ಳುತ್ತದೆ. ಅಲ್ಲದೇ, ಇದು ಕಣ್ಣಿಗೆ ಕಾಣಿಸುವುದೂ ಇಲ್ಲ. ಹಾಗಾಗಿ, ಈ ಹಣ್ಣುಗಳ ಸೇವನೆ ಮಾಡಿದ ಕೂಡಲೇ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು (Gastroenteritis) ಬಹು ಬೇಗನೇ ಬರುತ್ತವೆ. ಕೂಡಲೇ ವಾಂತಿ, ಭೇದಿ ಶುರುವಾಗುತ್ತದೆ. ಬಳಿಕ, ಇದಕ್ಕೆ ಸಂಬಂಧಿಸಿದಂತೆ ನಿತ್ರಾಣ, ಅತಿ ಜ್ವರ ಶುರುವಾಗುತ್ತದೆ. ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತದೆ.

ಇದನ್ನು ತಪ್ಪಿಸಬಲ್ಲ ಏಕೈಕ ಮಾರ್ಗವೆಂದರೆ, ಈ ಬಗೆಯ ಆಹಾರಗಳ ಸೇವನೆಯಾಗದಂತೆ ನೋಡಿಕೊಳ್ಳುವುದು. ಹಾಗಾಗಿ, ರಸ್ತೆಬದಿ ವ್ಯಾಪಾರಿಗಳಿಗೆ ಹೊಸ ಹಣ್ಣುಗಳನ್ನೇ ಮಾರುವಂತೆ ಹೇಳಲಾಗಿದೆ. ತೆರೆದ ಪ್ರದೇಶಗಳಲ್ಲಿ ಹಣ್ಣುಗಳನ್ನು ಕತ್ತರಿಸುವುದು, ಬಣ್ಣ ಸಿಂಪಡಿಸುವುದು ಮಾಡಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಅಂತೆಯೇ, ಸಾರ್ವಜನಿಕರು ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ತಿನ್ನಲೇಕೂಡದು ಎಂದು ಮನವಿ ಮಾಡಿಕೊಳ್ಳಲಾಗಿದೆ. ರೆಫ್ರಿಜರೇಟರ್‌ನಲ್ಲಿ ಹಣ್ಣುಗಳು ತಾಜಾ ಇರುವಂತೆ ಕಾಣುವುದೇ ಹೊರತು, ಅವು ಹಾಳಾಗಿರುತ್ತವೆ. ಇವುಗಳ ಸೇವನೆ ಅಪಾಯಕ್ಕೆ ಆಹ್ವಾನ ನೀಡಿದಂತೆ. ಅಂತೆಯೇ, ಈ ಕಾಲದಲ್ಲಿ ಬೆಳಿಗ್ಗೆ ತಯಾರಿಸಿದ ಆಹಾರವನ್ನು ರಾತ್ರಿ ಸೇವಿಸುವುದು ಕೂಡ ಅಪಾಯವೇ. ತಾಜಾ ಆಹಾರ ಸೇವನೆಯೇ ಸೂಕ್ತವಾದುದು ಎಂಬುದು ಡಾ.ವೆಂಕಟೇಶ್ ಅವರ ಸಲಹೆ.

ತುರ್ತು ಚಿಕಿತ್ಸೆಗೆ ಸಿದ್ಧತೆ: ಸಾಂಕ್ರಾಮಿಕ ರೋಗಗಳ ತಡೆಗೆ ಈಗಾಗಲೇ ಸಾಕಷ್ಟು ಸಿದ್ಧತೆ ನಡೆದಿದೆ. ಪ್ರಮುಖ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌1ಎನ್‌1 ಸೇರಿದಂತೆ ಮಲೇರಿಯಾ, ಡೆಂಗಿ ವಿರುದ್ಧ ಚಿಕಿತ್ಸೆಗೆ ಘಟಕಗಳನ್ನು ತೆರೆಯಲಾಗಿದೆ. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಾಲೆ– ಕಾಲೇಜುಗಳಲ್ಲಿ ತಿಳಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.