ADVERTISEMENT

ಆಯುಧ ಪೂಜೆಗೆ ಕ್ಷಣಗಣನೆ

ಅರಮನೆಯಲ್ಲಿ ಶಸ್ತ್ರಾಸ್ತ್ರಗಳಿಗೆ ವಿಶೇಷ ಪೂಜೆ; ಪರಂಪರೆಯ ಪಾಲನೆ

ಡಿ.ಬಿ, ನಾಗರಾಜ
Published 6 ಅಕ್ಟೋಬರ್ 2019, 16:19 IST
Last Updated 6 ಅಕ್ಟೋಬರ್ 2019, 16:19 IST
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಆಯುಧಪೂಜೆಯ ಮುನ್ನಾ ದಿನವಾದ ಭಾನುವಾರ ನಡೆದ ಹೂವಿನ ವಹಿವಾಟಿನ ಚಿತ್ರಣ
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಆಯುಧಪೂಜೆಯ ಮುನ್ನಾ ದಿನವಾದ ಭಾನುವಾರ ನಡೆದ ಹೂವಿನ ವಹಿವಾಟಿನ ಚಿತ್ರಣ   

ಮೈಸೂರು: ಮಹಾಭಾರತದ ಕಾಲಘಟ್ಟದಿಂದಲೂ ತನ್ನದೇ ವಿಶೇಷತೆ ಹೊಂದಿರುವ ಆಯುಧ ಪೂಜೆ ಮಹಾನವಮಿಯ ಸೋಮವಾರ (ಅ.7) ನಡೆಯಲಿದೆ. ಪೂಜೆಯ ಸಕಲ ಸಿದ್ಧತೆಗಳು ಭಾನುವಾರವೇ ಪೂರ್ಣಗೊಂಡಿದ್ದು, ಕ್ಷಣಗಣನೆ ಆರಂಭಗೊಂಡಿದೆ.

ಅರಮನೆಯಲ್ಲೂ ಆಯುಧ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಅರಮನೆ ಪುರೋಹಿತರ ಸಾರಥ್ಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜಾ ಕೈಂಕರ್ಯ, ಧಾರ್ಮಿಕ ವಿಧಿ–ವಿಧಾನ ನೆರವೇರಿಸಲಿದ್ದಾರೆ.

ಮಹಾರಾಜರ ಕಾಲದಲ್ಲಿ ಬಳಸಲಾಗುತ್ತಿದ್ದ ಕತ್ತಿ, ಗುರಾಣಿ ಮತ್ತಿತರ ಆಯುಧಗಳಿಗೆ ಅರಮನೆಯ ಒಳ ಆವರಣದಲ್ಲೇ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಗುವುದು. ಈ ಸಂದರ್ಭ ಪಟ್ಟದ ಆನೆ, ಕುದುರೆ, ಕತ್ತಿಗೂ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಇವುಗಳ ಜತೆಯಲ್ಲೇ ವಾಹನಗಳನ್ನು ಪೂಜಿಸಲಾಗುವುದು ಎಂದು ಪೂಜಾ ವಿಧಿ–ವಿಧಾನದಲ್ಲಿ ಭಾಗಿಯಾಗುವ ಅರ್ಚಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಜಾತಿ–ಧರ್ಮದ ಬೇಲಿಯಿಲ್ಲ:ಮಹಾಲಯ ಅಮಾವಾಸ್ಯೆ ಬಳಿಕದ ನವಮಿಯ ದಿನ ‘ಆಯುಧ ಪೂಜೆ’ ನಡೆಸುವುದು ಸಂಪ್ರದಾಯ. ಇದು ಶರನ್ನವರಾತ್ರಿಯ ಸಮಾರೋಪಕ್ಕೆ ಮುನ್ನುಡಿ ಬರೆಯಲಿದೆ. ಆಯುಧಪೂಜೆಗೆ ಜಾತಿ–ಧರ್ಮದ ಬೇಲಿಯಿಲ್ಲ. ಬಡವ–ಶ್ರೀಮಂತ ಎಂಬ ಭೇದ ಭಾವವಿಲ್ಲ. ವಸ್ತುಗಳನ್ನು ಸ್ವಚ್ಛಗೊಳಿಸಿ, ಶ್ರದ್ಧಾ ಭಕ್ತಿಯಿಂದ ಪೂಜಿಸಿ, ಕುಂಬಳಕಾಯಿ ಒಡೆದು, ನೈವೇದ್ಯ ಸಮರ್ಪಿಸುವುದು ಆಚರಣೆಯ ಪ್ರಮುಖ ಭಾಗವಾಗಿದೆ.

ಸೋಮವಾರ ನಸುಕಿನಲ್ಲೇ ಹಲವರು ಆಯುಧ ಪೂಜೆ ನೆರವೇರಿಸುವುದರಿಂದ, ಭಾನುವಾರ ಮುಸ್ಸಂಜೆಯಿಂದಲೇ ವಾಹನಗಳ ಸ್ವಚ್ಛತೆಯ ಕಾಯಕದಲ್ಲಿ ತಲ್ಲೀನರಾಗಿದ್ದು ವಿವಿಧೆಡೆ ಗೋಚರಿಸಿತು. ಇದರ ಪರಿಣಾಮ ನಗರದಲ್ಲಿನ ಸರ್ವೀಸ್ ಸೆಂಟರ್‌ಗಳು, ಗ್ಯಾರೇಜ್‌ಗಳು ಕಿಕ್ಕಿರಿದ ವಾಹನಗಳಿಂದ ತುಂಬಿದ್ದವು.

ಭರ್ಜರಿ ವಹಿವಾಟು: ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶ, ಪಟ್ಟಣ/ನಗರಗಳಲ್ಲೂ ಭಾನುವಾರವಿಡಿ ಆಯುಧಪೂಜಾ ಸಾಮಗ್ರಿಗಳ ಮಾರಾಟ ಬಿರುಸಿನಿಂದ ನಡೆಯಿತು.

ಬಾಳೆ ಕಂದು, ಚೆಂಡು ಹೂವು, ಕುಂಬಳಕಾಯಿ, ನಿಂಬೆಹಣ್ಣಿನ ಖರೀದಿಗೆ ಗ್ರಾಹಕರು ಹೆಚ್ಚಿನ ಒತ್ತು ನೀಡಿದ್ದರು. ಹಲವೆಡೆ ರೈತರೇ ನೇರವಾಗಿ ಮಾರಾಟ ನಡೆಸಿದ್ದು ಗೋಚರಿಸಿತು. ಬೆಲೆ ತುಸು ತುಟ್ಟಿಯಿತ್ತು.

ಮೈಸೂರಿನ ಪ್ರಮುಖ ರಸ್ತೆಗಳ ಬದಿಯಲ್ಲೇ ವ್ಯಾಪಾರ ಬಿರುಸಾಗಿತ್ತು. ಮಾರುಕಟ್ಟೆಯಲ್ಲಿ ಕಾಲಿಡಲು ಸ್ಥಳವಿಲ್ಲದಷ್ಟು ಜನದಟ್ಟಣೆ. ಚೌಕಾಶಿ ಖರೀದಿಯೂ ನಡೆಯಿತು ಎಂದು ಗ್ರಾಹಕಿ ಲಕ್ಷ್ಮೀ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.