
ಮೈಸೂರು: ಕೆಂಚಲಗೂಡಿನ ‘ಕಲಿಯುವ ಮನೆ’ ಮಕ್ಕಳು ಗೆದ್ದಲು ಹುಳುಗಳಾಗಿ ‘ರೂಪಾಂತರ’ಗೊಂಡು ಹಿರಿಯರಿಗೆ ಪಾಠ ಮಾಡಿದರು. ಮಲಯಾಳಂನ ‘ಕುಹೂ’ ನಾಟಕವು ರೈಲಿನ ಕಥನಗಳನ್ನು ಹೇಳುತ್ತಲೇ ದೇಶದ ಜನಜೀವನ, ಇತಿಹಾಸ, ರಾಜಕೀಯವನ್ನು ತಣ್ಣಗೆ ಅನಾವರಣಗೊಳಿಸಿದರೆ, ‘ಬಾಬ್‌ಮಾರ್ಲೆ ಫ್ರಂ ಕೋಡಿಹಳ್ಳಿ’ ನಾಟಕವು ದಲಿತ ಲೋಕವನ್ನು ತೆರೆದಿಟ್ಟಿತು.
ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ ಬಾಬಾಸಾಹೇಬ್’ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ ಮಂಗಳವಾರದ ನಾಟಕಗಳು ಸಹೃದಯರ ಮೆಚ್ಚುಗೆಗೆ ಪಾತ್ರವಾದವು.
ಕಲಿಸಿದ ಮಕ್ಕಳು
ಕಲಾಮಂದಿರದಲ್ಲಿ ನಡೆದ ‘ಮಕ್ಕಳ ಬಹುರೂಪಿ’ಯಲ್ಲಿ ರಾಜೇಶ್ ಮಾಧವನ್ ನಿರ್ದೇಶನದಲ್ಲಿ ‘ಕಲಿಯುವ ಮನೆ’ ಶಾಲೆಯ ಮಕ್ಕಳು ‘ರೂಪಾಂತರ’ ನಾಟಕವನ್ನು ಅಭಿನಯಿಸಿದರು. ಭಾರಿ ಮಳೆಯಿಂದ ತಪ್ಪಿಸಿಕೊಳ್ಳಲು ನಗರದ ಕಡೆ ಬರುವ ‘ಗೆದ್ದಲು ಹುಳು’ಗಳಿಗೆ ಇಲ್ಲಿ ಕಾಣುವುದು ರಾಸಾಯನಿಕಗಳಿಂದ ಆವೃತ್ತವಾದ ಪ್ರದೇಶಗಳು, ಪ‍್ಲಾಸ್ಟಿಕ್ ತ್ಯಾಜ್ಯ!
ಹಸಿವಿನಿಂದ ಕಂಗೆಟ್ಟ ಹುಳುಗಳಿಗೆ ಅಜ್ಜನೊಬ್ಬ ಮನುಷ್ಯರ ಸುಳಿವೇ ಇಲ್ಲದ ಗ್ರಂಥಾಲಯಕ್ಕೆ ಕರೆದೊಯ್ಯುತ್ತಾನೆ. ಒಂದು ಕಾಲದಲ್ಲಿ ಮಹನೀಯರನ್ನು ನೀಡಿದ ಗ್ರಂಥಾಲಯವು ದೂಳಿನಿಂದ ತುಂಬಿರುತ್ತದೆ. ಪುಸ್ತಕಗಳನ್ನು ತಿನ್ನುವ ಹುಳುಗಳು, ಆ ಕೃತಿಯ ಪಾತ್ರಗಳಾಗುವುದು ಪ್ರೇಕ್ಷಕರಾಗಿ ಬಂದಿದ್ದ ಮಕ್ಕಳಲ್ಲಿ ಕುತೂಹಲ ಹುಟ್ಟಿಸಿತು.
ಹುಳುಗಳು ವಿಕ್ರಮ– ಬೇತಾಳ, ರಾಮಾಯಣದ ಸೀತೆ– ರಾಮ– ಲಕ್ಷ್ಮಣ, ಮಹಾಭಾರತದ ಕೃಷ್ಣ– ಅರ್ಜುನ ಪಾತ್ರಗಳಾಗುತ್ತವೆ. ಪುಸ್ತಕಗಳಿಂದ ವಿಮುಖವಾಗಿರುವ ಜನರಿಗೆ ಗೆದ್ದಲು ಹುಳುಗಳು ಪಾಠ ಮಾಡುತ್ತವೆ. ಇದು ಮಕ್ಕಳು ಹಿರಿಯರು, ವಯಸ್ಕರಿಗೆ ಹೇಳಿದ ಬುದ್ಧಿವಾದವಾಗಿತ್ತು. ವೈಚಾರಿಕ ಲೋಕದೃಷ್ಟಿಯಾಗಿತ್ತು.
‘ಕುಹೂ’ ರಿಂಗಣ: ಕಿರುರಂಗಮಂದಿರದಲ್ಲಿ ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ತಂಡವು ಪ್ರಸ್ತುತಪಡಿಸಿದ ‘ಕುಹೂ’ ನಾಟಕವು, ರೈಲು ನಿಲ್ದಾಣಗಳ ಕಥೆಗಳನ್ನು ಹೇಳುತ್ತ ಭಾರತ ದರ್ಶನ ಮಾಡಿಸಿತು. 70ರ ದಶಕದಲ್ಲಿ ಬಳಕೆಯಾಗುತ್ತಿದ್ದ ಟ್ರಂಕ್‌ಗಳು ಬೋಗಿಗಳಾಗಿದ್ದವು. ಗಾಂಧಿಯನ್ನು ರೈಲಿನಿಂದ ಹೊರಕ್ಕೆ ದಬ್ಬಿದ ಘಟನೆ, ದೇಶ ವಿಭಜನೆ, ಯೋಧರ ಶವಗಳು, ಗೋದ್ರಾ ದುರಂತ, ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ರಂಗದ ಮೇಲೆ ರಿಂಗಣಿಸಿತು.
ಭೂಮಿಗೀತದಲ್ಲಿ ಕೆ.ಪಿ.ಲಕ್ಷ್ಮಣ ನಿರ್ದೇಶನದಲ್ಲಿ ‘ಜಂಗಮ ಕಲೆಕ್ಟಿವ್ ಬೆಂಗಳೂರು’ ತಂಡದವರು ಅಭಿನಯಿಸಿದ ‘ಬಾಬ್‌ಮಾರ್ಲೆ ಫ್ರಂ ಕೋಡಿಹಳ್ಳಿ’ ನಾಟಕವು ಸಮಾಜದಲ್ಲಿ ಅಸ್ಲೃಶ್ಯತೆ ಆಚರಣೆ, ದಲಿತರು ಅನುಭವಿಸುವ ತಾರತಮ್ಯ, ಯಾರೂ ಊಹಿಸದ, ಯಾರ ಅನುಭವಕ್ಕೂ ದಕ್ಕದ ಕಥನವನ್ನು ಅನಾವರಣಗೊಳಿಸಿತು. ಮೇಲರಿಮೆ– ಕೀಳರಿಮೆ ಎಲ್ಲಿಯವರೆಗೆ ಇರುತ್ತದೊ ಅಲ್ಲಿಯವರೆಗೆ ಶೋಷಣೆ, ಹೋರಾಟ, ಸಂಘರ್ಷ ಇರುತ್ತದೆ ಎಂಬುದನ್ನು ಸಾರಿದ ದೃಶ್ಯಕಾವ್ಯವಾಗಿತ್ತು.
ಈ ಮೂರು ನಾಟಕಗಳನ್ನು ಶ್ರೀರಂಗಪಟ್ಟಣದ ‘ನಿರ್ದಿಗಂತ’ ನಿರ್ಮಿಸಿತ್ತು. ನಟ ಪ್ರಕಾಶ್‌ರಾಜ್ ಅವರು ಕುಟುಂಬ ಮತ್ತು ಸ್ನೇಹಿತರೊಂದಿಗೆ ನಾಟಕಗಳನ್ನು ವೀಕ್ಷಿಸಿದರು. ‘ವನರಂಗ’ದಲ್ಲಿ ಅಸ್ಸಾಂನ ಬುದುಂಗ್‌ದುಪ್ಪ ಕಲಾಕೇಂದ್ರದ ಕಲಾವಿದರು ಧನಂಜಯ ರಾಭಾ ನಿರ್ದೇಶನದಲ್ಲಿ ‘ದದನ್ ರಾಜಾ’ ನಾಟಕ ಅಭಿನಯಿಸಿದರು. ಎಲ್ಲ ರಂಗಮಂದಿರಗಳು ತುಂಬಿದ್ದವು.
ಶ್ರೀರಂಗದಲ್ಲಿ ಚಲನಚಿತ್ರೋತ್ಸವಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂವಿಧಾನ್ ಮೇಕಿಂಗ್ ಆಫ್ ದಿ ಇಂಡಿಯನ್ ಕಾನ್‌ಸ್ಟಿಟ್ಯೂಷನ್ (ಹಿಂದಿ), ಜೈ ಭೀಮ್ ಕಾಮ್ರೇಡ್ –1 (ಹಿಂದಿ), ಮಾರಿಕೊಂಡವರು (ಕನ್ನಡ) ಸಿನಿಮಾಗಳು ಪ್ರದರ್ಶನಗೊಂಡವು.
ಕಲಾಮಂದಿರದಲ್ಲಿ ‘ಸಂಗೀತ ಕುರ್ಚಿ’ಗಳು!
‘ಬಹುರೂಪಿ’ ನಾಟಕೋತ್ಸವದ ಎಲ್ಲ ರಂಗಮಂದಿರಗಳಲ್ಲಿ ‘ಭೀಮಕಾಯ’ದ ಕಲಾಮಂದಿರದ ಕುರ್ಚಿಗಳು ಸಂಗೀತ ಹಾಡಿದವು! ವಿವಿಧ ಶಾಲೆಯ ಮಕ್ಕಳು ತುಂಬಿದ್ದ ರಂಗಮಂದಿರದ ಕುರ್ಚಿಗಳ ಸ್ಪ್ರಿಂಗ್‌ಗಳು ಶಬ್ಧಮಾಡಿದವು. ಅದರಿಂದ ಪ್ರದರ್ಶನಗೊಂಡ ನಾಟಕದಲ್ಲಿ ದನಿಯೇ ಕೇಳುತ್ತಿರಲಿಲ್ಲ. ಚೂಟಿಯಾಗಿರುವ ಮಕ್ಕಳು ಸ್ಪ್ರಿಂಗ್‌ಗಳ ಜಾದೂವನ್ನು ಸ್ನೇಹಿತರಿಗೂ ತೋರಿದರು.
ಇದಕ್ಕೆ ಸಂವಾದಿಯಾಗಿ ಧ್ವನಿವರ್ಧಕವನ್ನು ಸರಿಯಾಗಿ ಅಳವಡಿಸಿರಲಿಲ್ಲ. ವೇದಿಕೆಯಲ್ಲಿ ಇಳಿಬಿಟ್ಟಿದ್ದ ‘ಮೈಕ್’ಗಳು ದೊಡ್ಡವರ ಮಟ್ಟಕ್ಕೆ ತೂಗುತ್ತಿದ್ದವು. ಅದರಿಂದ ‘ಕಲಿಯುವ ಮನೆ’ ಶಾಲೆಯ ಪುಟಾಣಿ ಕಲಾವಿದರ ಧ್ವನಿಯೇ ಕೇಳಲಿಲ್ಲ. ಅವರು ಕಂಠಶೋಷಣೆಗೆ ಒಳಗಾದರು. ಹಿನ್ನೆಲೆಯಲ್ಲಿ ಹಾಡುವವರ ಸಂಗೀತಗಾರರ ಧ್ವನಿ ಏರು ಸ್ತರದಲ್ಲಿ ಕೇಳಿದರೆ ವೇದಿಕೆಯಲ್ಲಿ ಸಂಭಾಷಣೆಯ ಧ್ವನಿ ತಗ್ಗಿತ್ತು. ‘ಮಂದಿರದ ‘ಸಂಗೀತ ಕುರ್ಚಿ’ಗಳು ದಶಕದಿಂದಲೂ ಹಾಡುತ್ತಿದ್ದರೂ ಅದನ್ನು ಸರಿಪಡಿಸುವ ಕೆಲಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾಡಿಲ್ಲ. ಲೈಟಿಂಗ್‌ಗಳನ್ನು ಕಾಣುವಂತೆ ಅಳವಡಿಸಲಾಗಿದೆ. ಎಲ್ಲಿಂದ ಬೆಳಕು ಬರುತ್ತದೆ ಎಂಬುದು ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಧ್ವನಿ– ಬೆಳಕೂ ಸರಿಯಾಗಿರದಿದ್ದರೆ ಹೇಗೆ’ ಎಂದು ರಂಗ ಕಲಾವಿದ ಮಂಜುನಾಥ್ ಹೇಳಿದರು. ಈ ಕುರಿತ ಪ್ರತಿಕ್ರಿಯೆಗೆ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಪ್ರತಿಕ್ರಿಯಿಸಲಿಲ್ಲ.
ಮೊದಲ ಬಾರಿ ‘ಜರ್ಮನ್ ಟೆಂಟ್’
ಪುಸ್ತಕ ಕರಕುಶಲ ಮೇಳಕ್ಕೆ ಇದೇ ಮೊದಲ ಬಾರಿ ‘ಜರ್ಮನ್ ಟೆಂಟ್’ ಅನ್ನು ಬಹುರೂಪಿಯಲ್ಲಿ ಅಳವಡಿಸಿರುವುದು ಮಾರಾಟಗಾರರಿಗೆ ಸಂತಸವನ್ನು ತಂದಿದೆ. ಈ ಮೊದಲು ಶಾಮಿಯಾನ ಮತ್ತು ತಗಡಿನ ಟೆಂಟ್‌ಗಳನ್ನು ಹಾಕಲಾಗುತ್ತಿತ್ತು. ದೂಳು ಆವರಿಸುತ್ತಿತ್ತು. ಹೊಸ ಮಾದರಿಯಲ್ಲಿ ಅಳವಡಿಕೆ ಮಾಡಿದ್ದಕ್ಕೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಎಂದಿನಂತೆ ₹ 2 ಸಾವಿರ ಠೇವಣಿ ₹ 2 ಸಾವಿರ ಶುಲ್ಕವನ್ನು ಪ‍್ರತಿ ಮಳಿಗೆಗೆ ಅಳವಡಿಸಲಾಗಿದೆ. ಮೊದಲಿಗಿಂತಲೂ ಟೆಂಟ್ ವ್ಯವಸ್ಥೆ ಉತ್ತಮವಾಗಿದ್ದು ಮಾದರಿಯಾಗಿದೆ. ದೂಳು ಮಳೆ ಕಾಡುತ್ತಿಲ್ಲ. ಠೇವಣಿ ಹಣವನ್ನು ವಾಪಸ್ ಮಾಡುತ್ತಾರೆ. ಈ ಬಾರಿ 8 ದಿನ ಉತ್ಸವ ಇರುವುದರಿಂದ ಹೆಚ್ಚು ವ್ಯಾಪಾರ ಆಗಲಿದೆ’ ಎಂದು ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜನಪದ ವೈವಿಧ್ಯ
ಕಿಂದರಿಜೋಗಿ ಆವರಣದಲ್ಲಿ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಕಾರದಲ್ಲಿ ಸೇಲಂನ ಮುಪ್ಪಿಡತಿ ಸೂರ್ಯನ್ ತಂಡದವರು ಕೀಲುಕುದುರೆ ಕರಗಂ ಕಾವಾಡಿ ತಪ್ಪಲ್ಟಂ ಒಯಿಲಟ್ಟಂ ನ್ಯಾಂಡಿಮೇಳಂ ನೃತ್ಯವನ್ನು ಪ್ರಸ್ತುತಪಡಿಸಿದ್ದು ಸೆಳೆಯಿತು. ತಮಿಳು ಚಲನಚಿತ್ರಗಳಲ್ಲಿ ಹಾಸುಹೊಕ್ಕಾಗಿರುವ ಈ ನೃತ್ಯಗಳ ಸೊಬಗನ್ನು ನೇರವಾಗಿ ಪ್ರೇಕ್ಷಕರು ಕಣ್ತುಂಬಿಕೊಂಡರು. ಹಾಸನದ ಕುಮಾರಯ್ಯ ತಂಡದವರ ‘ಚಿಟ್ ಮೇಳ’ ಎಲ್ಲರನ್ನು ಆಕರ್ಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.