ADVERTISEMENT

‘ಬಹುರೂಪಿ’ಗೆ ವರ್ಣರಂಜಿತ ಚಾಲನೆ

ಜ.18ರ ವರೆಗೆ ರಂಗಾಸಕ್ತರಿಗೆ ರಸದೌತಣ

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:31 IST
Last Updated 12 ಜನವರಿ 2019, 19:31 IST

ಮೈಸೂರು: ಸಾಂಸ್ಕೃತಿಕ ವೈಭವ, ಕಲಾ ತಂಡಗಳ ಪ್ರದರ್ಶನದಿಂದ ರಂಗೇರಿದ ಸುಂದರ ಸಂಜೆಯಲ್ಲಿ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ವರ್ಣರಂಜಿತ ಚಾಲನೆ ಲಭಿಸಿತು.

ಕಲಾಮಂದಿರದ ವನರಂಗದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸನ್ನ ಅವರು ನಾಟಕೋತ್ಸವ ಉದ್ಘಾಟಿಸಿದರು. ಮೈಮ್‌ ರಮೇಶ್‌ ನೇತೃತ್ವದಲ್ಲಿ ರಂಗಾಯಣದ ಕಲಾವಿದರು ‘ಲಿಂಗ ಸಮಾನತೆ’ ಕುರಿತ ನೃತ್ಯ ರೂಪಕ ಪ್ರದರ್ಶಿಸಿ ವಿಶಿಷ್ಟ ರೀತಿಯಲ್ಲಿ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ರಂಗಾಯಣದ ವತಿಯಿಂದ ಈ ಬಾರಿ ‘ಲಿಂಗ ಸಮಾನತೆ’ ಶೀರ್ಷಿಕೆ ಅಡಿಯಲ್ಲಿ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಜ.18ರ ವರೆಗೆ ನಡೆಯಲಿದೆ.

ADVERTISEMENT

ಯಕ್ಷಗಾನ ವೇಷಧಾರಿಗಳು, ಗೊಂಬೆಯಾಟ, ಕೀಲುಕುದುರೆ ಕಲಾವಿದರು ಕಲಾಮಂದಿರದ ಆವರಣದಲ್ಲಿ ನೆರೆದ ಮಕ್ಕಳು ಮತ್ತು ಹಿರಿಯರಿಗೆ ಮನರಂಜನೆ ನೀಡಿದರೆ ಗೊರವರ ಕುಣಿತ, ಡೊಳ್ಳು ಕುಣಿತ, ಕೊಂಬು ಕಹಳೆ ಕಲಾವಿದರು ಅಲ್ಲಿದ್ದವರ ಎದೆಬಡಿತ ಹೆಚ್ಚುವಂತೆ ಮಾಡಿದರು.

ನಾಟಕೋತ್ಸವದ ಅಂಗವಾಗಿ ಕಲಾಮಂದಿರದ ಆವರಣದಲ್ಲಿ ತೆರೆದಿರುವ ಪುಸ್ತಕ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಪ್ರಸನ್ನ ಅವರು ಉದ್ಘಾಟಿಸಿದರು. 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಮೊದಲ ದಿನ ನೂರಾರು ರಂಗಾಸಕ್ತರು ನಾಟಕೋತ್ಸವ ತಾಣಕ್ಕೆ ಭೇಟಿ ನೀಡಿದರು.

ಏಳು ದಿನ ನಡೆಯಲಿರುವ ನಾಟಕೋತ್ಸವದಲ್ಲಿ ಬಹುಭಾಷಾ ನಾಟಕ ಮತ್ತು ಚಲನಚಿತ್ರಗಳ ಪ್ರದರ್ಶನದ ಜತೆಗೆ ವಿಚಾರ ಸಂಕಿರಣ, ಭಿತ್ತಿಚಿತ್ರ ಪ್ರದರ್ಶನ, ಕರಕುಶಲ ಮೇಳ, ಪುಸ್ತಕ ಮೇಳ, ಚಿತ್ರಕಲಾ ಪ್ರದರ್ಶನ, ಚಿತ್ರಸಂತೆ ಒಳಗೊಂಡಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡದ ಆರು ನಾಟಕಗಳ ಜತೆಗೆ ವಿವಿಧ ರಾಜ್ಯಗಳ 12 ಭಾಷೆಗಳ ನಾಟಕಗಳು ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಮೂರು ಚಲನಚಿತ್ರಗಳ ಪ್ರದರ್ಶನವೂ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.