ADVERTISEMENT

ಸಮಾಜದಲ್ಲಿ ಸಮತೋಲನ: ಮಹಿಳಾ ಸಬಲೀಕರಣ ಅವಶ್ಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 15:58 IST
Last Updated 15 ಜುಲೈ 2022, 15:58 IST
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಪುಷ್ಪರಾಣಿ ಪಿ.ಜಿ., ಡಾ.ರೇಣು ಅಗರ್‌ವಾಲ್‌, ರಾಧಾ ಪಾಲ್ಗೊಂಡಿದ್ದಾರೆ
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಪುಷ್ಪರಾಣಿ ಪಿ.ಜಿ., ಡಾ.ರೇಣು ಅಗರ್‌ವಾಲ್‌, ರಾಧಾ ಪಾಲ್ಗೊಂಡಿದ್ದಾರೆ   

ಮೈಸೂರು: ‘ಸಮಾಜದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಮಹಿಳಾ ಸಬಲೀಕರಣ ಅವಶ್ಯವಾಗಿದೆ’ ಎಂದು ಸಿಎಫ್‌ಟಿಆರ್‌ಐ ಮಾಜಿ ಮುಖ್ಯ ವಿಜ್ಞಾನಿ ಡಾ.ರೇಣು ಅಗರ್‌ವಾಲ್‌ ಹೇಳಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನ ವಿಭಾಗಗಳು ಆಂತರಿಕ ಗುಣಮಟ್ಟ ಕೋಶದ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಸಮಾನತೆ ಮತ್ತು ಕೌಟುಂಬಿಕ ಹಿಂಸೆಯನ್ನು ಮಹಿಳೆಯು ಹಿಂದಿನಿಂದಲೂ ಎದುರಿಸುತ್ತಾ ಬಂದಿರುವುದು ಶೋಚನೀಯ’ ಎಂದರು.

ADVERTISEMENT

‘ಮಹಿಳಾ ಸಬಲೀಕರಣ ವಿಷಯ ಬಂದಾಗ ಸಾಮಾಜಿಕ ಮತ್ತು ಆರ್ಥಿಕ ಆಯಾಮದಿಂದ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸಬೇಕಾಗುತ್ತದೆ. ಮಹಿಳೆಯ ಸ್ಥಾನಮಾನ ಮತ್ತು ಹಕ್ಕುಗಳ ವಿಷಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಆಗಬೇಕಾಗಿರುವುದು ಬಹಳಷ್ಟಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.‌

‘ಮಹಿಳೆಯ ಶಕ್ತಿ ಅಪಾರವಾದುದು. ಸಮಾಜದಲ್ಲಿ ಮಹಿಳೆಯು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ, ಸಾಧಿಸಿದರೂ ಸ್ಥಾನ ಕೊಡಬೇಕಾದರೆ ಅವಳ ನಾಯಕತ್ವದ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕುರಿತು ಅಪನಂಬಿಕೆ ವ್ಯಕ್ತವಾಗುವುದು ವಿಷಾದನೀಯ’ ಎಂದರು.

‘ಸರ್ಕಾರವು ಮಹಿಳೆಯರ ಪರವಾಗಿ ಎಷ್ಟೇ ವಿಶೇಷ ಸೌಲಭ್ಯ ಕಲ್ಪಿಸಿದರೂ, ಕಾನೂನುಗಳನ್ನು ರೂಪಿಸಿದರೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸೋತಿದ್ದೇವೆ. ಸಮ ಸಮಾಜದಲ್ಲಿ ಸ್ತ್ರೀ ಹಾಗೂ ಪುರುಷರಿಬ್ಬರ ಪಾತ್ರ ಹಾಗೂ ಪ್ರಾಮುಖ್ಯತೆ ಇದ್ದೇ ಇರುತ್ತದೆ. ಕೌಟುಂಬಿಕ ನೆಲೆಯಲ್ಲಿ ಮಹಿಳೆ–ಪುರುಷರಿಬ್ಬರೂ ಸಮಾನವಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಅವಶ್ಯ’ ಎಂದು ತಿಳಿಸಿದರು.

‘ಮಹಿಳೆಯು ಕೌಟುಂಬಿಕ ಅಥವಾ ತಾನು ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ಅನುಭವಿಸುವ ಕಿರುಕುಳ, ತಾರತಮ್ಯದಂತಹ ಸವಾಲುಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಬೇಕು’ ಎಂದು ಹೇಳಿದರು.

ಪ್ರಭಾರ ಪ್ರಾಂಶುಪಾಲೆ ಡಾ.ಪುಷ್ಪರಾಣಿ ಪಿ.ಜಿ. ಉಪಸ್ಥಿತರಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಧಾ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಚಲುವೇಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.