ADVERTISEMENT

ನಂಜನಗೂಡು; ಪದವೀಧರನ ಕೈಹಿಡಿದ ರಸಬಾಳೆ, ಅಂಗಾಂಶ ಕೃಷಿ ವಿಧಾನದ ಮೊರೆ ಹೋದ ರೈತ

ಎಂ.ಪ್ರಕಾಶ್
Published 28 ನವೆಂಬರ್ 2021, 4:32 IST
Last Updated 28 ನವೆಂಬರ್ 2021, 4:32 IST
ಕೂಗಲೂರು ಗ್ರಾಮದಲ್ಲಿ ನಂಜನಗೂಡು ರಸಬಾಳೆ ಬೆಳೆದಿರುವ ರೈತ ಸತ್ಯನಾರಾಯಣ (ಎಡ ಚಿತ್ರ). ರಸಬಾಳೆ ಗೊನೆ
ಕೂಗಲೂರು ಗ್ರಾಮದಲ್ಲಿ ನಂಜನಗೂಡು ರಸಬಾಳೆ ಬೆಳೆದಿರುವ ರೈತ ಸತ್ಯನಾರಾಯಣ (ಎಡ ಚಿತ್ರ). ರಸಬಾಳೆ ಗೊನೆ   

ನಂಜನಗೂಡು: ತಾಲ್ಲೂಕಿನ ಕೂಗಲೂರು ಗ್ರಾಮದ ಬಿಎಸ್ಸಿ ಪದವೀಧರ ಸತ್ಯನಾರಾಯಣ ಅವರು, ಕೆಮಿಕಲ್ ಕಾರ್ಖಾನೆಯ ನೌಕರಿ ತೊರೆದು ಕೃಷಿಗೆ ಮರಳಿ ನಂಜನಗೂಡು ರಸಬಾಳೆ ಬೆಳೆದು, ಅಪರೂಪದ ತಳಿ ಉಳಿಸಿ, ಬೆಳೆಸಲು ಮುಂದಾಗಿದ್ದಾರೆ.

ನಾಲ್ಕೂವರೆ ಎಕರೆ ಜಮೀನಿನಲ್ಲಿ ತೆಂಗಿನ ಮರಗಳ ಮಧ್ಯೆ ಮಿಶ್ರ ಬೆಳೆಯಾಗಿ ನಾಲ್ಕು ವರ್ಷಗಳಿಂದ ನಂಜನಗೂಡು ರಸಬಾಳೆ ಬೆಳೆದು ಯಶಸ್ವಿಯಾಗಿದ್ದಾರೆ.

80ರ ದಶಕದಲ್ಲಿ ಬಾಳೆ ಕಂದುಗಳನ್ನು ನೆಟ್ಟು ಬೆಳೆಯಲಾಗುತ್ತಿತ್ತು. ಈಗ ಅಂಗಾಂಶ ಕೃಷಿ ವಿಧಾನ ಬಳಸಿ ನಾಟಿ ಮಾಡುತ್ತಿದ್ದಾರೆ. ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲೂ ರಸಬಾಳೆ ಬೆಳೆಯಲಾಗುತ್ತಿದೆ. ಇತರೆ ಬಾಳೆ ಹಣ್ಣಿನಂತೆಯೇ ಗಾತ್ರ ಹೊಂದಿರುವ ಹಣ್ಣುಗಳು ವಿಶಿಷ್ಟ ರುಚಿಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹೊಂದಿವೆ.

ADVERTISEMENT

‘ಪ್ರತಿ ಹಣ್ಣಿಗೆ ₹10 ರಿಂದ ₹12 ಬೆಲೆ ಇದ್ದರೂ ಜನ ಖರೀದಿಸುತ್ತಾರೆ. ಬಾಳೆಗೊನೆ 9 ರಿಂದ 13 ಕೆ.ಜಿ ತೂಗುತ್ತದೆ. ವ್ಯಾಪಾರಿಗಳು ಪ್ರತಿ ಹಣ್ಣಿಗೆ ₹5 ರಿಂದ ₹6 ದರದಲ್ಲಿ ನಮ್ಮಿಂದ ಖರೀದಿಸುತ್ತಾರೆ. ಎಲ್ಲೆಡೆ ಬೇಡಿಕೆ ಹೆಚ್ಚಿದೆ’ ಎಂದು ರೈತ ಸತ್ಯನಾರಾಯಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

90ರ ದಶಕದಲ್ಲಿ ತಾಲ್ಲೂಕಿನಲ್ಲಿ ಕಬಿನಿ ಬಲದಂಡೆ ಯೋಜನೆ ಸಾಕಾರಗೊಂಡ ನಂತರ ನೀರಾವರಿ ಬೆಳೆಗಳಾದ ಭತ್ತ, ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ವ್ಯಾಪಕವಾಗಿ ಬೆಳೆಯಲು ಆರಂಭಿಸಿದ್ದರಿಂದ ಈ ಭಾಗದ ಭೂಮಿ ಸಹಜವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿತು. ಆಗ ವಿಶಿಷ್ಟ ನಂಜನಗೂಡು ರಸಬಾಳೆ ತಳಿಗೆ ಮಣ್ಣು ಮತ್ತು ನೀರಿನ ಮೂಲಕ ಸೊರಗು ರೋಗವೂ
ತಗುಲಿತು.

‘ರೋಗ ಉಲ್ಬಣಗೊಂಡ ಪರಿಣಾಮವಾಗಿ ಶೇ 30 ರಿಂದ 90 ರವರೆಗೆಇಳುವರಿ ಕಡಿಮೆಯಾಗಿ, ರೈತರಿಗೆ ನಷ್ಟವುಂಟಾದ್ದರಿಂದ ರೈತರು ಅನಿವಾರ್ಯವಾಗಿ ನಂಜನಗೂಡು ರಸಬಾಳೆ ಬೆಳೆಯುವುದನ್ನು ಕಡಿಮೆ ಮಾಡಿದರು. ಈಗಲೂ ತಾಲ್ಲೂಕಿನ ದೇವರಸನಹಳ್ಳಿಯ ಸುತ್ತಮುತ್ತಲ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಳೆದ ರಸಬಾಳೆ ಹಣ್ಣು ವಿಶಿಷ್ಟ ರುಚಿ, ಸುವಾಸನೆ ಹೊಂದಿರುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಹೇಳುತ್ತಾರೆ.

ಕಂದು ನೆಟ್ಟು ಬೆಳೆಯುವ ರಸಬಾಳೆಗೆ ಪಿಜೇರಿಯಂ ಫಂಗಸ್ ತಗುಲುವುದರಿಂದ ಅಂಗಾಂಶ ವಿಧಾನದಲ್ಲಿ ನಾಟಿ ಮಾಡುವುದು ಉತ್ತಮ. ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ (ಐಐಎಚ್ಆರ್) ಈಗಲೂ ಮೂಲ ‘ನಂಜನಗೂಡು ರಸಬಾಳೆ’ಯನ್ನು ಅಂಗಾಂಶ ಕೃಷಿ ವಿಧಾನದಲ್ಲಿ ಸಂಸ್ಕರಣೆ ಮಾಡಿ ತಳಿಯನ್ನು ಉಳಿಸಿಕೊಳ್ಳಲಾಗಿದೆ. ಈ ಬಾಳೆ ಬೆಳೆಯಲು ಇಚ್ಛಿಸುವ ರೈತರು ಪಡೆದುಕೊಂಡು ಕೃಷಿ ಮಾಡಬಹುದು’ ಎಂದು ಅವರು ಮಾಹಿತಿ ನೀಡುತ್ತಾರೆ.

ಮೈಸೂರಿನ ಶ್ರೀರಾಂಪುರ ರಿಂಗ್ ರಸ್ತೆ ಸಮೀಪದ ತೋಟದಲ್ಲಿ ರಾಘವೇಂದ್ರ ಎಂಬುವವರು ನೈಸರ್ಗಿಕವಾಗಿ ಅಂಗಾಂಶ ಕೃಷಿ ವಿಧಾನದಲ್ಲಿ ಬಾಳೆ ಸಸಿಗಳನ್ನು ಬೆಳೆಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ ವತಿಯಿಂದ ನಂಜನಗೂಡು ರಸಬಾಳೆ ಬೆಳೆಯಲು ಮುಂದಾಗುವ ರೈತರಿಗೆ ನರೇಗಾ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ ₹2 ಲಕ್ಷ ಸಹಾಯ ಧನ ನೀಡಲಾಗುತ್ತಿದೆ. ಬರಡು ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯದಲ್ಲೂ ಕೃಷಿ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.