ಕಡತ
(ಸಾಂದರ್ಭಿಕ ಚಿತ್ರ)
ಮೈಸೂರು: ಬನ್ನೂರು ಹೋಬಳಿಯನ್ನು ‘ತಾಲ್ಲೂಕು ಕೇಂದ್ರ’ವನ್ನಾಗಿ ಮಾಡಬೇಕು ಎಂಬ ಕೂಗಿಗೆ ಮತ್ತೆ ‘ಜೀವ’ ಬಂದಿದೆ.
ಸದ್ಯ ತಿ.ನರಸೀಪುರ ತಾಲ್ಲೂಕಿನ ಭಾಗವಾಗಿರುವ ಬನ್ನೂರು ಹೋಬಳಿಗೆ ತಾಲ್ಲೂಕು ಸ್ಥಾನಮಾನ ನೀಡಿ ಮೇಲ್ದರ್ಜೆಗೇರಿಸಬೇಕು ಎಂಬುದು ಆ ಭಾಗದ ಜನರಿಂದ ಹಿಂದಿನಿಂದಲೂ ಇರುವ ಬೇಡಿಕೆ. ಸಾಲಿಗ್ರಾಮವನ್ನು ಪ್ರತ್ಯೇಕ ತಾಲ್ಲೂಕು ಮಾಡಿದ ಸಂದರ್ಭದಲ್ಲೇ ಬನ್ನೂರು ಜನರಿಂದಲೂ ಕೂಗು ಕೇಳಿಬಂದಿತ್ತು. ನಂತರ, ತಣ್ಣಗಾಗಿತ್ತು. ಈಗ, ಮತ್ತೊಮ್ಮೆ ಹಕ್ಕೊತ್ತಾಯ ಕೇಳಿಬರುತ್ತಿದೆ.
ಹೊಸದಾಗಿ ತಾಲ್ಲೂಕುಗಳ ರಚನೆಗೆ ಸಂಬಂಧಿಸಿದ ಪ್ರಸ್ತಾವಗಳಿದ್ದರೆ ಡಿಸೆಂಬರ್‌ನೊಳಗೆ ಕಳುಹಿಸಬೇಕು ಎಂದು ಕೇಂದ್ರ ಸರ್ಕಾರವು ಸೂಚಿಸಿರುವ ಕಾರಣ, ಬನ್ನೂರು ಭಾಗದ ಮುಖಂಡರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವುದಕ್ಕೆ ನಿರ್ಧರಿಸಿದ್ದಾರೆ.
ಈ ಸಂಬಂಧ ಈಚೆಗೆ ನಡೆದ ಸಭೆಯಲ್ಲಿ ಪ್ರಮುಖರು ಸಮಾಲೋಚನೆ ನಡೆಸಿದ್ದು, ಮೈಸೂರು ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ತೆರಳಿ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ. ‘ಈಗ ಆಗದಿದ್ದರೆ 2030ರವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ, ಈಗಲೇ ಸ್ಥಾನಮಾನ ದೊರೆಯುವಂತೆ ನೋಡಿಕೊಳ್ಳಬೇಕು’ ಎನ್ನುವುದು ಮುಖಂಡರ ನಿರ್ಣಯವಾಗಿದ್ದು, ಹಕ್ಕೊತ್ತಾಯವನ್ನು ತೀವ್ರವಾಗಿ ಮಂಡಿಸಲು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರದ ಗಮನಸೆಳೆಯುವುದಕ್ಕೂ ಯೋಜಿಸಿದ್ದಾರೆ.
10ನೇ ತಾಲ್ಲೂಕಿಗೆ ಬೇಡಿಕೆ: ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ರಚಿಸಲಾದ ಸಾಲಿಗ್ರಾಮ, ಸರಗೂರು ಸೇರಿದಂತೆ ಒಂಬತ್ತು ತಾಲ್ಲೂಕುಗಳಿವೆ. ಈಗ, 10ನೇ ತಾಲ್ಲೂಕಿಗೆ ಆ ಭಾಗದವರಿಂದ ಬೇಡಿಕೆ ಕೇಳಿಬಂದಿದೆ.
ತಿ.ನರಸೀಪುರ ತಾಲ್ಲೂಕಿನಲ್ಲಿ ಪ್ರಸ್ತುತ ಬನ್ನೂರು, ತಲಕಾಡು, ಸೋಸಲೆ, ಕಸಬಾ, ಮೂಗೂರು ಹೋಬಳಿಗಳಿವೆ. ಇತರೆ ಹೋಬಳಿಗಳಿಗೆ ಹೋಲಿಸಿದರೆ ಬನ್ನೂರು ಪ್ರಮುಖ ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾಕಷ್ಟು ಚಟುವಟಿಕೆಗಳ ಕೇಂದ್ರವೂ ಆಗಿದೆ. ಪುರಸಭೆಯ ಸ್ಥಾನಮಾನವನ್ನು ಪಡೆದಿರುವ ಬನ್ನೂರು ಪಟ್ಟಣದಲ್ಲಿ 25ಸಾವಿರಕ್ಕೂ ಜಾಸ್ತಿ ಜನಸಂಖ್ಯೆ ಇದೆ. ಬನ್ನೂರು ಒಳಗೊಂಡಿರುವ ತುರುಗನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ 45ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ.
ಇತರ ಹೋಬಳಿಗಳಿಗೆ ಹೋಲಿಸಿದರೆ, ದೊಡ್ಡ ವ್ಯಾಪ್ತಿಯನ್ನು ಬನ್ನೂರು ಹೊಂದಿದೆ. ಸುತ್ತಳತೆಯೂ ಜಾಸ್ತಿ ಇದೆ. ತಿ.ನರಸೀಪುರ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ ಗಡಿಯಲ್ಲಿರುವ ದೊಡ್ಡಮುಲಗೂಡು ಗ್ರಾಮದವರು ಈಗಿನ ತಾಲ್ಲೂಕು ಕೇಂದ್ರ ತಿ.ನರಸೀಪುರಕ್ಕೆ ಬರಲು ಸರಾಸರಿ 33 ಕಿ.ಮೀ. ಆಗುತ್ತದೆ. ಅಂತೆಯೇ ಕೊನೆ ಭಾಗದ ಕರುವಳ್ಳಿಕೊಪ್ಪಲು, ಗುಡ್ಡದಕೊಪ್ಪಲು, ಅಂಕನಹಳ್ಳಿ ಕಾಡುಕೊತ್ತನಹಳ್ಳಿಯಿಂದ 35 ಕಿ.ಮೀ. ಆಗುತ್ತದೆ. ದೊಡ್ಡಮುಲಗೂಡು ಹಾಗೂ ಯಾಚೇನಹಳ್ಳಿಯವರಿಗೆ ತಾಲ್ಲೂಕು ಕೇಂದ್ರ ತಿ.ನರಸೀಪುರಕ್ಕಿಂತಲೂ ಪಕ್ಕದ ಮಂಡ್ಯ ಜಿಲ್ಲೆಯೇ ಸಮೀಪವಾಗುತ್ತದೆ.
ಹಿಂದೆ, ಬನ್ನೂರು ವಿಧಾನಸಭಾ ಕ್ಷೇತ್ರವೂ ಇತ್ತು.
ಬನ್ನೂರು ತಾಲ್ಲೂಕು ಕೇಂದ್ರ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿದ್ದಾರೆ. ಬೇಡಿಕೆಯು ಹಿಂದಿನಿಂದಲೂ ಇರುವ ಬಗ್ಗೆ ಮುಖ್ಯಮಂತ್ರಿ ಅವರಿಗೂ ಗೊತ್ತಿದೆಸುನೀತಾ ವೀರಪ್ಪಗೌಡ ಮಾಜಿ ಶಾಸಕಿ
ಬನ್ಜೂರು ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ತಾಲ್ಲೂಕು ಕೇಂದ್ರವಾದರೆ ಜನರಿಗೆ ಬಹಳಷ್ಟು ಅನುಕೂಲವಿದ್ದು ಇದನ್ನು ಸಿ.ಎಂ ಗಮನಕ್ಕೆ ತರಲಾಗವುದುವೈ.ಎನ್. ಶಂಕರೇಗೌಡ ಸಹಕಾರಿ ಧುರೀಣ
ಮೈಸೂರು ಜಿಲ್ಲೆಯಲ್ಲಿ ಈಗಿರುವ ತಾಲ್ಲೂಕುಗಳು
* ಮೈಸೂರು * ತಿ.ನರಸೀಪುರ * ನಂಜನಗೂಡು * ಹುಣಸೂರು * ಪಿರಿಯಾಪಟ್ಟಣ * ಎಚ್.ಡಿ. ಕೋಟೆ * ಕೆ.ಆರ್.ನಗರ * ಸಾಲಿಗ್ರಾಮ * ಸರಗೂರು
ಎಲ್ಲರಿಗೂ ಸಹಕಾರಿ
‘ಹಲವು ಹಳ್ಳಿಗಳ ಜನರು ಈಗ ಸರ್ಕಾರಿ ಕೆಲಸಗಳಿಗೆಂದು ತಿ.ನರಸೀಪುರಕ್ಕೆ ಹೋಗಿ ಬರುವುದಕ್ಕೆ ತೊಂದರೆ ಆಗುತ್ತಿದೆ ಸಮಯವೂ ಸಾಕಷ್ಟು ಬೇಕಾಗುತ್ತದೆ. ಆದ್ದರಿಂದ ಬನ್ನೂರು ತಾಲ್ಲೂಕು ಕೇಂದ್ರವಾದರೆ ಬಹಳಷ್ಟು ಹಳ್ಳಿಗಳ ಜನರಿಗೆ ಅನುಕೂಲ ಆಗುತ್ತದೆ. ಅಲ್ಲಿ ಸಾಕಷ್ಟು ಸಂಪನ್ಮೂಲವಿದೆ ವರಮಾನವೂ ಬರುತ್ತದೆ. ತಾಲ್ಲೂಕು ಕೇಂದ್ರವಾದರೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ಹೇಳುತ್ತಾರೆ ಸಹಕಾರಿ ಧುರೀಣ ವೈ.ಎನ್. ಶಂಕರೇಗೌಡ. ‘ಬನ್ನೂರು ಹೋಬಳಿಯು ಸಾಕಷ್ಟು ನೀರಾವರಿ ಕ್ಷೇತ್ರವನ್ನೂ ಹೊಂದಿದ್ದು ತಾಲ್ಲೂಕು ಆಗುವುದಕ್ಕೆ ಬೇಕಾಗುವ ಅರ್ಹತೆಯನ್ನೆಲ್ಲಾ ಅಕ್ಷರಶಃ ಹೊಂದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದೊಯ್ಯಲಾಗುವುದು. ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಗಮನವನ್ನೂ ಸೆಳೆಯಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.