
ಮೈಸೂರು: ‘ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಶೋಷಿತರ ಕಾರ್ಯವಿಧಾನ ಬದಲಾಗಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಜೈ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯು ಇಲ್ಲಿನ ಜಯನಗರ ರೈಲ್ವೆ ಗೇಟ್ ಬಳಿ ಗುರುವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ 208ನೇ ವರ್ಷದ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಸಾಮಾಜಿಕ ಶ್ರೇಣೀಕರಣದ ವ್ಯವಸ್ಥೆ ಬದಲಾಗಿದೆ. 21ನೇ ಶತಮಾನದ ಕಟು ವಾಸ್ತವ ಅರಿತು, ಸಮಸ್ಯೆ ಎದುರಿಸುತ್ತಿರುವ ಶೋಷಿತರ ಕಾರ್ಯವಿಧಾನವೂ ಬದಲಾಗಬೇಕಿದೆ. ಜನ ಸಾಮಾಜಿಕ, ಆರ್ಥಿಕ, ರಾಜಕೀಯ ಶೋಷಣೆಯನ್ನು ಏಕಕಾಲದಲ್ಲಿ ಅನುಭವಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.
‘20ನೇ ಶತಮಾನ ಸಂಘಟನೆಯ ಕಾಲವಾಗಿತ್ತು. 21ನೇ ಶತಮಾನ ಬಹುತೇಕ ವಿಘಟನೆಯ ಕಾಲವಾಗಿ ಮಾರ್ಪಟ್ಟಿದೆ. ಕೋರೆಗಾಂವ್ ವಿಜಯಸ್ತಂಭವು ಸಾಮಾಜಿಕ ಹಾಗೂ ದಮನಿತರ ಧ್ರುವೀಕರಣಕ್ಕೆ ಪ್ರೇರಣೆ ನೀಡಿತ್ತು. ಆದರೆ, ಪ್ರಸ್ತುತ ಧಾರ್ಮಿಕ ಧ್ರುವೀಕರಣ ಹೆಚ್ಚಾಗಿ, ಸಾಮಾಜಿಕ ಶ್ರೇಣಿ ವ್ಯವಸ್ಥೆ ಬದಲಾಗಿದೆ. ಚಾರಿತ್ರಿಕ ಘಟನೆಗಳಿಗೆ ಇತಿಹಾಸದ ಕಾರಣಕ್ಕಾಗಿ ಗೌರವ ನೀಡಿ, ಅದರಿಂದ ಪ್ರೇರಣೆ ಪಡೆಯಬೇಕು. ಅದರೊಂದಿಗೆ ಸಮಕಾಲಿನ ಪ್ರಜ್ಞೆ ಹಾಗೂ ಸಮಕಾಲಿನ ವಿವೇಕದ ಮೂಲಕ ಕ್ರಿಯಾಶೀಲರಾಗಬೇಕು’ ಎಂದು ಕಿವಿಮಾತು ಹೇಳಿದರು.
‘70– 80ರ ದಶಕದಲ್ಲಿ ವರ್ಣಾಶ್ರಮ ವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತಿದ್ದೆವು. ಪ್ರಸ್ತುತ ಶೂದ್ರ, ಶೋಷಿತರಲ್ಲಿಯೇ ಶ್ರೇಣೀಕರಣವಿದೆ. ಸಾಮಾಜಿಕ ಶ್ರೇಣೀಕರಣ ಅನೇಕ ಸ್ತರ ಪಡೆದಿದೆ. ಈ ವಾಸ್ತವ ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ 70ರ ದಶಕದಲ್ಲೇ ಉಳಿದು, ಚಲನಶೀಲ ಸಮಾಜವನ್ನು ಎದುರಿಸಲಾಗದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.
‘ಸಮಾಜ ಮುಂದುವರಿದಿದೆ ಎಂದು ಹೇಳಿದರೂ, ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಸ್ವಾತಂತ್ರ್ಯ, ಶಿಕ್ಷಣ, ಉದ್ಯೋಗ ದೊರೆತರೂ ಸಮಾಜದ ಒಂದು ಭಾಗ ಅಮಾನೀಯವಾಗಿ ಮುಂದುವರಿದಿದೆ. ವರದಿಯೊಂದರ ಪ್ರಕಾರ ಪ್ರತಿ 18 ನಿಮಿಷಕ್ಕೆ ಒಬ್ಬ ದಲಿತನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿ ವಾರ 13 ಜನ ದಲಿತರ ಹತ್ಯೆಯಾಗುತ್ತಿದೆ. ದಿನಕ್ಕೆ 86 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಅದರಲ್ಲಿ 10 ಮಂದಿ ದಲಿತರಾಗಿರುತ್ತಾರೆ. ಇಂತಹ ಸಮಾಜ ಮಾನವೀಯವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಿದೆ’ ಎಂದರು.
‘ಕೋರೆಂಗಾವ್ ವಿಜಯವನ್ನು ದೇಶದ್ರೋಹ ಎಂದು ಅಳೆಯಬಾರದು’ ಎಂದು ಹೇಳಿದರು.
ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ), ಮಾಜಿ ಮೇಯರ್ ಪುರುಷೋತ್ತಮ, ಸಮಾತಾ ವೇದಿಕೆಯ ರತಿರಾವ್, ಸಮಾಜ ಸೇವಕ ಆರ್.ಸಿ.ಮಹೇಶ್, ಸಮಿತಿಯ ಅಧ್ಯಕ್ಷ ಎಸ್.ಉಮೇಶ್, ಸೆಸ್ಕ್ ಇಇ ಎಸ್.ಬಿ.ಅನಿತಾ ಭಾಗವಹಿಸಿದ್ದರು.
‘ಅವಮಾನಿಸದಿರಿ’
‘ಯಾರ್‍ಯಾರು ಸವಲತ್ತು ಪಡೆಯುತ್ತಿದ್ದಾರೆಯೋ ಅವರೆಲ್ಲಾ ಸ್ವಾರ್ಥಿಗಳಾಗಿದ್ದು ಇನ್ನೊಬ್ಬರ ಬಗ್ಗೆ ಯೋಚಿಸುತ್ತಿಲ್ಲ. ಕ್ಷುಲ್ಲಕ ಜಗಳದಲ್ಲಿ ತೊಡಗಿದ್ದಾರೆ ಎಂಬ ಅಂಬೇಡ್ಕರ್ ಮಾತು ನಿಜವಾಗಿದೆ. ಶೋಷಿತರು ಒಂದಾಗಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳುವ ಸ್ಥಿತಿ ಬಂದಿದೆ. ಅಂಬೇಡ್ಕರ್ ಘೋಷ ವಾಕ್ಯಕ್ಕೆ ನಿಲ್ಲುವ ವ್ಯಕ್ತಿಯಲ್ಲ. ಸಾಮಾಜಿಕ ಆರ್ಥಿಕ ಮಹಿಳಾ ಶೋಷಣೆ ವಿರುದ್ಧವಾಗಿ ನಿಂತಿದ್ದರು. ಮೀಸಲಾತಿಗಷ್ಟೆ ಮೀಸಲಿಡುವುದು ಅವರಿಗೆ ಮಾಡುವ ಅವಮಾನ’ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.
‘ಅಶೋಕ ವಿಜಯ ಸ್ತಂಭ ಸ್ಥಾಪನೆ’
‘ಅಶೋಕಪುರಂ ಹೆಬ್ಬಾಗಿಲಿನಲ್ಲಿ ಬೌದ್ಧ ಮಹಾಸಮ್ಮೇಳನದ ಸವಿನೆನಪಿನಲ್ಲಿ ₹5 ಲಕ್ಷ ವೆಚ್ಚದಲ್ಲಿ ಅಶೋಕ ವಿಜಯಸ್ತಂಭ ಸ್ಥಾಪಿಸಲಿದ್ದೇವೆ’ ಎಂದು ಮಾಜಿ ಮೇಯರ್ ಪುರುಷೋತ್ತಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.