ADVERTISEMENT

ಮೈಸೂರು | ‘ಬ್ಯಾರಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಲಿ’

ಬ್ಯಾರಿ ಕುಟುಂಬ ಸಮ್ಮಿಲನ: ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿದ ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 4:23 IST
Last Updated 11 ಆಗಸ್ಟ್ 2025, 4:23 IST
ಮೈಸೂರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್‌ನಿಂದ ಭಾನುವಾರ ನಡೆದ ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಕ್ಸೂದ್‌ ಅಹ್ಮದ್ ಮುಲ್ಕಿ, ಹೈದರಾಲಿ ಕಾಟಿಪಳ್ಳ ಹಾಗೂ ಪಿ.ಎಂ.ಹಸನಬ್ಬ ಮೂಡುಬಿದಿರೆ ಅವರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರದಾನ ಮಾಡಿದರು
ಮೈಸೂರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್‌ನಿಂದ ಭಾನುವಾರ ನಡೆದ ಬ್ಯಾರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಕ್ಸೂದ್‌ ಅಹ್ಮದ್ ಮುಲ್ಕಿ, ಹೈದರಾಲಿ ಕಾಟಿಪಳ್ಳ ಹಾಗೂ ಪಿ.ಎಂ.ಹಸನಬ್ಬ ಮೂಡುಬಿದಿರೆ ಅವರಿಗೆ 2024ನೇ ಸಾಲಿನ ಗೌರವ ಪ್ರಶಸ್ತಿಯನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪ್ರದಾನ ಮಾಡಿದರು   

ಮೈಸೂರು: ‘ಶ್ರಮ ನಂಬಿ ಬದುಕುವ ಬ್ಯಾರಿ ಸಮುದಾಯವು ಶಿಕ್ಷಣಕ್ಕೂ ಆದ್ಯತೆ ಕೊಡಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮೈಸೂರಿನ ಬ್ಯಾರಿ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿನ ಎ.ಆರ್‌.ಕನ್ವೆನ್ಷನ್‌ ಸೆಂಟರ್‌ನಲ್ಲಿ ಭಾನುವಾರ ನಡೆದ ಬ್ಯಾರಿ ಕುಟುಂಬ ಸಮ್ಮಿಲನ(ಪಿರ್ಸಪಾಡ್‌) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಮನೆಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಯಾವ ಸರ್ಕಾರಕ್ಕೂ ಇರುವುದಿಲ್ಲ. ಆದರೆ, ಮನೆಯಲ್ಲಿನ ಮಕ್ಕಳಿಗೆ ಆ ಶಕ್ತಿ ಇರುತ್ತದೆ. ಹೆಣ್ಣಾಗಲಿ, ಗಂಡಾಗಲಿ ಅವರಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಮನೆಯ ಸಮಸ್ಯೆ, ಸಮುದಾಯದ ಸಮಸ್ಯೆ ದೂರವಾಗುತ್ತದೆ’ ಎಂದರು.

ADVERTISEMENT

‘ಬ್ಯಾರಿ ಭಾಷೆಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮವಿದು.‌ ಭವಿಷ್ಯದ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಲುಪಿಸುವುದು ಅಗತ್ಯ. ಭಾಷೆ ಕೇವಲ ಸಂವಹನ ಮಾಧ್ಯಮ ಅಲ್ಲ. ಇದರಲ್ಲಿ ಆಚಾರ, ವಿಚಾರ, ಸಮುದಾಯ ಗೌರವ ಅಡಗಿದೆ’ ಎಂದರು.

ಸಮುದಾಯದ ಸಾಧಕರಾದ ಮಕ್ಸೂದ್‌ ಅಹ್ಮದ್ ಮುಲ್ಕಿ(ಬ್ಯಾರಿ ಭಾಷೆ– ಸಂಘಟನೆ), ಪಿ.ಎಂ.ಹಸನಬ್ಬ ಮೂಡುಬಿದಿರೆ(ಬ್ಯಾರಿ ಕಲೆ– ಸಂಸ್ಕೃತಿ), ಹೈದರಾಲಿ ಕಾಟಿಪಳ್ಳ(ಬ್ಯಾರಿ ಸಾಹಿತ್ಯ) ಅವರಿಗೆ 2024ನೇ ಗೌರವ ಪ್ರಶಸ್ತಿ ನೀಡಲಾಯಿತು. ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕರ್ಜುನ ಸ್ವಾಮಿ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲಾ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯಸ್‌ ರೋಡ್ರಿಗಸ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್‌ ಅಜೀಜ್, ಬ್ಯಾರಿ  ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಎಚ್‌.ಉಮರ್‌, ರಿಜಿಸ್ಟ್ರಾರ್‌ ಜಿ.ರಾಜೇಶ್‌, ಬ್ಯಾರಿ ವೆಲ್‌ಫೇರ್‌ ಅಸೊಸಿಯೇಷನ್‌ ಮೈಸೂರು ಘಟಕದ ಅಧ್ಯಕ್ಷ ಯು.ಕೆ.ಹಮೀದ್‌, ಪ್ರಧಾನ ಕಾರ್ಯದರ್ಶಿ ಎಂ.ಐ.ಅಹ್ಮದ್‌ ಬಾವ, ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜರಿದ್ದರು.

- ಬ್ಯಾರಿ ಭಾಷೆ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ. ನಮ್ಮ‌ ಸಂಸ್ಕೃತಿ ಭಾಷೆ ಬಳಕೆ ಉತ್ತೇಜಿಸಲು ಸಂಘಟಿತ ಪ್ರಯತ್ನ ಅಗತ್ಯ
ಅತ್ತೂರು ಚೆಯ್ಯಬ್ಬ ಬೆಂಗಳೂರಿನ ದಿ ಬ್ಯಾರೀಸ್‌ ವೆಲ್‌ಫೇರ್‌ ಅಸೋಸಿಯೇಷನ್‌ ಕಾರ್ಯಕಾರಿ ಸಮಿತಿ ಸದಸ್ಯ

‘ಮಂಗಳೂರು ಬ್ಯಾರಿ ಭವನ ಕಾಮಗಾರಿ ಶೀಘ್ರ’ ‘ಮಂಗಳೂರಿನ ಬ್ಯಾರಿ ಭವನ ಕಾಮಗಾರಿ ಆರಂಭಿಸಲು ಈ ಬಾರಿಯ ವಿಧಾನಸಭೆ ಅಧಿವೇಶನ ಮುಗಿಯುವುದರೊಳಗೆ ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಿ ತೀರ್ಮಾನ ಮಾಡಲಾಗುವುದು’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಭರವಸೆ ನೀಡಿದರು. ‘ಬ್ಯಾರಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಮಗಳೂರು ಶಿವಮೊಗ್ಗ ಉಡುಪಿ ಮಡಿಕೇರಿ ಮೈಸೂರಿನಲ್ಲಿಯೂ ಮುಖಂಡರು ಸ್ಥಳವನ್ನು ಸೂಚಿಸಿದರೆ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ. ಮುಂದೆ ಅನುಕೂಲವಾದಾಗ ಉಪಯುಕ್ತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಹುದು. ಎನ್‌ಜಿಒ ಸ್ಥಾಪಿಸಿ ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.