ADVERTISEMENT

ವಿದೇಶಿ ಮಾಧ್ಯಮದಲ್ಲಿ ಬೆತ್ತಲಾದ ಭಾರತ: ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 7 ಮೇ 2021, 9:32 IST
Last Updated 7 ಮೇ 2021, 9:32 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ‘ಕೋವಿಡ್‌–19ನ ಎರಡನೇ ಅಲೆ ಭಾರತವನ್ನು ವಿದೇಶಿ ಮಾಧ್ಯಮದಲ್ಲಿ ಬೆತ್ತಲಾಗಿಸಿದೆ. ಕೋವಿಡ್‌ನಿಂದಾಗುವ ಸಾವು–ನೋವನ್ನು ಕಡಿಮೆ ಮಾಡಬೇಕು ಎಂದರೇ; ತಕ್ಷಣದಿಂದಲೇ ದೇಶವ್ಯಾಪಿ ಕಠಿಣ ಲಾಕ್‌ಡೌನ್‌ ಜಾರಿಗೊಳಿಸುವುದೊಂದೇ ಇದೀಗ ನಮಗುಳಿದಿರುವ ಏಕೈಕ ದಾರಿ’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಶುಕ್ರವಾರ ಇಲ್ಲಿ ತಿಳಿಸಿದರು.

‘ನೆರೆಯ ಆಂಧ್ರಪ್ರದೇಶ, ತೆಲಂಗಾಣ ಈ ಹೊತ್ತಿನಲ್ಲಿ ನಮಗೆ ಮಾದರಿಯಾಗಬೇಕಿದೆ. ಅಲ್ಲಿನ ಸರ್ಕಾರಗಳು ಕೋವಿಡ್‌ ಪೀಡಿತರಿಗೆ ಸರ್ಕಾರಿ–ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಜೊತೆಗೆ ಸೌಲಭ್ಯವನ್ನು ನೀಡಿವೆ. ಜನರ ಸಂಕಷ್ಟಕ್ಕೆ ಸ್ಪಂದಿಸಿವೆ’ ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಬೆಳಗಾವಿಯಲ್ಲಿರುವ ಸುವರ್ಣಸೌಧವನ್ನೇ ಕೋವಿಡ್‌–19 ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಕೆಲ ಮೂಲ ಸೌಕರ್ಯ ಒದಗಿಸಿದರೆ 2 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಬಹುದು. ಉತ್ತರ ಕರ್ನಾಟಕಕ್ಕೆ ಇದರಿಂದ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಧೃತರಾಷ್ಟ್ರನಿಗೆ ವಿದುರ ಹೇಳಿದಂತೆ, ನಾನು ಯಡಿಯೂರಪ್ಪನಿಗೆ ಪುತ್ರ ವ್ಯಾಮೋಹ ಬಿಡಿ ಎಂದೇಳಿರುವೆ. ಶಕುನಿಗಳನ್ನು, ಮೆಚ್ಚಿಸುವವರ ಮಾತು ನಂಬಬೇಡಿ ಎಂದಿದ್ದೇನೆ. ಖಡಕ್‌ ಆಗಿ ಅಧಿಕಾರ ನಡೆಸಿ ಎನ್ನುವುದೇ ತಪ್ಪಾ? ಮೈಸೂರು–ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಬಾಯಿ ಮುಚ್ಚಿಕೊಂಡು ನಿಮ್ಮ ಕೆಲಸ ಮಾಡಿ ಎಂದು ಹೇಳುವ ಅಧಿಕಾರವೂ ಸಿಎಂಗಿಲ್ಲವಾ?’ ಎಂದು ವಿಶ್ವನಾಥ್‌ ಮತ್ತೊಮ್ಮೆ ಚಾಟಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.