ಹುಣಸೂರು: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ರೈತರು ತಂಬಾಕು ಬೇಸಾಯ ಆರಂಭಿಸಿದ್ದಾರೆ. ಸಸಿ ನಾಟಿ ಮಾಡಿ, ರಸಗೊಬ್ಬರ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಮೈಸೂರು ಮತ್ತು ಪಿರಿಯಾಪಟ್ಟಣ ವಲಯದಲ್ಲಿ ಈವರೆಗೆ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಸಸಿ ನಾಟಿ ಪ್ರಕ್ರಿಯೆ ಮುಗಿದಿದೆ. ಮಳೆ ಸುರಿದ ಪರಿಣಾಮ 30 ರಿಂದ 40 ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಪ್ರಗತಿಯಲ್ಲಿದ್ದು, ಈ ಹಂಗಾಮಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ತಂಬಾಕು ಬೆಳೆ ಆವರಿಸಿಕೊಳ್ಳುವ ನಿರೀಕ್ಷೆ ಇದೆ.
ರೋಗ ನಿಯಂತ್ರಣ: ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರದ ಹಿರಿಯ ವಿಜ್ಞಾನಿ ರಾಮಕೃಷ್ಣನ್ ಮಾಹಿತಿ ನೀಡಿ, ವಾತಾವರಣದಲ್ಲಿ ಭಾರಿ ಬದಲಾವಣೆ ಕಾಣುತ್ತಿದ್ದು, ತೇವಾಂಶ ಮತ್ತು ಒಣ ಹವೆ ಸಸಿಗಳಿಗೆ ರೋಗ ಬಾಧೆ ಹೆಚ್ಚಾಗಿ ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
‘ಏಪ್ರಿಲ್ ಮೊದಲ ವಾರದಲ್ಲಿ ನಾಟಿ ಮಾಡಿದ ತಂಬಾಕು ಈಗಾಗಲೇ ಎಲೆ ಸುಳಿ ರೋಗ, ಕಾಂಡ ಕೊರೆಯುವ ಹುಳು ಬಾಧೆ ಮತ್ತು ಕರಿಕಡ್ಡಿ ರೋಗಕ್ಕೆ ಸಿಲುಕಿದ್ದು, ಕೇಂದ್ರ ಶಿಫಾರಸು ಮಾಡಿದ ಔಷಧೋಪಚಾರ ಮಾಡಬೇಕು. ಎಲೆ ಸುರುಳಿ ರೋಗ ಬಾಧೆ ನಿಯಂತ್ರಣಕ್ಕೆ ಪನಾಮ ಅಥವಾ ವಿಲ್ಲಾ ಎಂಬ ಔಷಧಿಯಲ್ಲಿ 5 ಗ್ರಾಂ ಹಾಗೂ ಕೆ.– 20 5 ಗ್ರಾಂ ಪ್ರತಿ 50 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ರೋಗ ನಿಯಂತ್ರಣ ಸಾಧ್ಯ’ ಎಂದು ತಿಳಿಸಿದರು.
‘ಕಾಂಡ ಕೊರೆಯುವ ಹುಳು ನಿಯಂತ್ರಣಕ್ಕೆ ಸಸಿಯಲ್ಲಿ ಗಂಟು ಕಂಡು ಬರುವ ಸ್ಥಳವನ್ನು ಸೀಳಿ ಹುಳುವಿಗೆ ಕೊರಾಂಜನ್ ಅಥವಾ ಎಂಗೇಜ್ ಎಂಬ ಔಷಧಿ 5 ಗ್ರಾಂ ಪ್ರತಿ 50 ಲೀ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಕರಿಕಟ್ಟಿ ರೋಗ ಬಾಧೆ ನಿಯಂತ್ರಣಕ್ಕೆ ರೆಡೋಮಿಲ್ ಗೋಲ್ಡ್ 250 ಹಾಗೂ ಟ್ಯಾಗ್ ಮಿಲ್ 250 ಹಾಗೂ ಕ್ಯಾಲ್ಸಿಯಂ ನೈಟ್ರೇಟ್ (ಸಿ.ನ್) ಗೊಬ್ಬರ ಮಿಶ್ರಣ ಮಾಡಿ ಪ್ರತಿ ಗಿಡದ ಬುಡಕ್ಕೆ 100 ಎಂ.ಎಲ್ ಹಾಕಬೇಕು. ಇದರಿಂದ ರೋಗ ಹತೋಟಿಗೆ ಬರಲಿದೆ’ ಎಂದು ಮಾಹಿತಿ ನೀಡಿದರು.
‘ಫೋಟೊಸಿಂಥಸಿಸ್ ಪ್ರಕ್ರಿಯೆಗೆ ಗ್ರೀನ್ ಮಿರಾಕಲ್ ಅಥವಾ ಟೀಮಾ ಸ್ಪ್ರೇ (ಎನ್) ಎಂಬ ಔಷಧಿಯನ್ನು ಪ್ರತಿ 15 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆಯಿಂದ ಎಲೆ ಒಣಗುವಿಕೆ ನಿಯಂತ್ರಿಸಬಹುದು’ ಎಂದು ಹೇಳಿದರು
ಗೊಬ್ಬರ: ಎರಡು ಕಂತಿನಲ್ಲಿ ಗೊಬ್ಬರ ನೀಡಬೇಕಿದ್ದು, ಮೊದಲ ಹಂತದಲ್ಲಿ ಪ್ರತಿ ಎಕರೆಗೆ 66 ಕೆ.ಜಿ. ಅಮೋನಿಯಂ ಸಲ್ಫೇಟ್, 66 ಕೆ.ಜಿ. ಡಿ.ಎ.ಪಿ. 25 ಕೆ.ಜಿ ಸಿ.ಎನ್. ಮತ್ತು 50 ಕೆ.ಜಿ. ಎಸ್.ಒ.ಪಿ ನೀಡಬೇಕು. 30 ದಿನದ ಅಂತರದಲ್ಲಿ ಎರಡನೇ ಹಂತದ ಗೊಬ್ಬರ 66 ಕೆ.ಜಿ. ಅಮೋನಿಯಂ ಮತ್ತು 50 ಎಸ್.ಒ.ಪಿ ನೀಡಬೇಕು.
ಸೊರಗು ರೋಗ ಬಾಧೆ ನಿಯಂತ್ರಿಸುವ ಶಕ್ತಿ ಹೊಂದಿರುವ ಎಚ್.ಸಿ.ಎಚ್– 222 ತಳಿ ಕೇಂದ್ರೀಯ ತಂಬಾಕು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ್ದು ರೈತ ಆರ್ಥಿಕ ನಷ್ಟ ತಗ್ಗಿಸಿ ಉತ್ತಮ ಇಳುವರಿ ಪಡೆಯಬಹುದಾಗಿದೆ.ರಾಮಕೃಷ್ಣನ್ ಸಿ.ಟಿ.ಆರ್.ಐ ಹಿರಿಯ ವಿಜ್ಞಾನಿ
3 ಎಕರೆಯಲ್ಲಿ ಬೆಳೆದ ತಂಬಾಕಿನಲ್ಲಿ ಎಲೆ ಸುಳಿ ರೋಗ ಬಾಧೆ ಕಾಡುತ್ತಿದ್ದು ಸಿ.ಟಿ.ಆರ್.ಐ ವಿಜ್ಞಾನಿಗಳ ಸಲಹೆಯಂತೆ ಔಷಧೋಪಚಾರ ಮಾಡಿ ಬೆಳೆ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕಳೆದ ಮೂರು ವರ್ಷದಿಂದಲೂ ವಿಜ್ಞಾನಿಗಳ ಸಲಹೆಯಂತೆ ಬೇಸಾಯ ಮಾಡುತ್ತಿದ್ದೇನೆ.ಪ್ರಗತಿಪರ ರೈತ ಚಂದ್ರು ಬೀರನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.