ADVERTISEMENT

ಡ್ರಗ್ಸ್‌ ತಯಾರಿಕೆ | ಬೆಂಗಳೂರೇ ಕೇಂದ್ರ: ಹೆದ್ದಾರಿಯೇ ಸುಲಭ ಮಾರ್ಗ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 23:44 IST
Last Updated 29 ಜುಲೈ 2025, 23:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎ.ಐ ಚಿತ್ರ

ಮೈಸೂರು: ‘ಡ್ರಗ್ಸ್‌ ಮಾರಾಟಕ್ಕೆ ಆರೋಪಿಗಳಿಗೆ ರಾಜಧಾನಿ ಬೆಂಗಳೂರೇ ಗುರಿ. ಯಾವ ತಪಾಸಣೆಯೂ ನಡೆಯದ ಮೈಸೂರು–ಬೆಂಗಳೂರು ಹೆದ್ದಾರಿಯೇ ಡ್ರಗ್ಸ್‌ ಸಾಗಿಸಲು ಅವರಿಗೆ ಸುಲಭ ಮಾರ್ಗವಾಗಿತ್ತು. ಹೀಗಾಗಿಯೇ ಹೆದ್ದಾರಿಗೆ ಸಮೀಪವಿರುವ ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್‌ನಲ್ಲಿ ಘಟಕ ತೆರೆದಿದ್ದರು’ ಎಂಬ ಅಂಶವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.  

ADVERTISEMENT

‘ಹೊರರಾಜ್ಯಗಳ ಘಟಕಗಳ ಮೇಲೆ ದಾಳಿ ನಡೆದಾಗ ದಂಧೆಕೋರರು, ಹೊಸ ಸ್ಥಳ ಅರಸಿ ಮೈಸೂರಿಗೆ ಬಂದಿದ್ದರು. ಬೆಂಗಳೂರಿಗೆ ಮಾದಕವಸ್ತು ರವಾನೆಗೆ ಹತ್ತಿರವಿರುವ ಜಾಗ ಗುರುತಿಸಿದ್ದರು. ಮುಂಬೈನಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ ಸಲೀಂ ನೀಡಿದ ಮಾಹಿತಿಯಿಂದ ಆತನ ಸಹಚರರನ್ನು ಪತ್ತೆಹಚ್ಚಲು ಸಾಧ್ಯವಾಯಿತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಮಾನತಿಗೆ ತಡೆ: ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಂಡಿದ್ದ ನರಸಿಂಹರಾಜ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮಿಕಾಂತ ಕೆ.ತಳವಾರ್ ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇಲಾಖೆ ಸೂಚನೆ ಆಧರಿಸಿ ಪೊಲೀಸ್‌ ಆಯುಕ್ತರು ಹೊರಡಿಸಿದ್ದ ಅಮಾನತು ಆದೇಶ ತಡೆಹಿಡಿದಿದೆ. 

5.7 ಕೆ.ಜಿ ಗಾಂಜಾ ವಶ: ಮಾದಕ ವ್ಯಸನಿಗಳ ಪತ್ತೆಗಾಗಿ ನಡೆಸುತ್ತಿರುವ ಕಾರ್ಯಾಚರಣೆ ವೇಳೆ ಪೊಲೀಸರು ಸೋಮವಾರ ರಾತ್ರಿ 5.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಂಡಿ ಮೊಹಲ್ಲಾ, ಉದಯಗಿರಿ, ಎನ್ಆರ್ ಮೊಹಲ್ಲಾ, ನಜರಬಾದ್, ಕೆ.ಆರ್.ಮೊಹಲ್ಲಾದಲ್ಲಿ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 26 ಜನ ಗಾಂಜಾ ಸೇವಿಸಿದವರನ್ನು ಹಾಗೂ 6 ಪೆಡ್ಲರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. 12 ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಪೆಡ್ಲರ್‌ಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡಿಸಿದರು.

‘ಕಾರ್ಯಾಚರಣೆಗೆ ಡಿಸಿಪಿ ಹಾಗೂ ಎಸಿಪಿ ನೇತೃತ್ವದ ಏಳು ಹಾಗೂ ಎಸ್‌ಐಗಳ ನೇತೃತ್ವದಲ್ಲಿ ಏಳು ತಂಡ ರಚಿಸಲಾಗಿದೆ’ ಎಂದು ಆಯುಕ್ತೆ ಸೀಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳದ ಬಾಡಿಗೆ ತಿಂಗಳಿಗೆ ₹2 ಲಕ್ಷ

ಮಾದಕ ವಸ್ತು ತಯಾರಿಕಾ ಘಟಕವಿದ್ದ ಸ್ಥಳದ ಮಾಲೀಕರ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕುಂಬಾರಕೊಪ್ಪಲಿನ ಕೇಬಲ್ ಮಹೇಶ್ ಅವರಿಗೆ ಸೇರಿದ ಜಾಗ ಇದಾಗಿದ್ದು, ತಿಂಗಳಿಗೆ ₹ 20 ಸಾವಿರಕ್ಕೆ ಸ್ಥಳೀಯ ಅಜ್ಮಲ್ ಅವರಿಗೆ ಬಾಡಿಗೆಗೆ ನೀಡಿದ್ದರು. ಅಲ್ಲಿ ಶೆಡ್ ನಿರ್ಮಿಸಿ ಅಜ್ಮಲ್ ಕಾರು ರಿಪೇರಿ ಮಾಡುತ್ತಿದ್ದು, ಉಳಿದ ಅರ್ಧ ಭಾಗವನ್ನು ತಿಂಗಳಿಗೆ ₹ 2 ಲಕ್ಷಕ್ಕೆ ಮುಂಬೈನ ರಿಯಾನ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದರು.

‘ಆರೋಪಿಗಳು ಎಂಡಿ (ಮಫೆ ಡ್ರೋನ್‌) ಎಂಬ ಡ್ರಗ್ಸ್‌ ತಯಾರಿಸುತ್ತಿದ್ದರು. ಅಕ್ರಮವಾಗಿ ಘಟಕ ತೆರೆಯಲು ನೆರವಾದ ಆರೋಪದಡಿ ಸ್ಥಳದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ’ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಪ್ರತಿಕ್ರಿಯೆಗೆ ಸ್ಥಳದ ಮಾಲೀಕ ಕೇಬಲ್‌ ಮಹೇಶ್‌ ಸಂಪರ್ಕಕ್ಕೆ ಲಭ್ಯರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.