ADVERTISEMENT

ಬೆಟ್ಟದಪುರ: ಸಿಡಿಲು ಮಲ್ಲಿಕಾರ್ಜುನ ಬ್ರಹ್ಮರಥೋತ್ಸವ

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ವೈಭವದ ಜಾತ್ರೆ; ವಿಶೇಷ ಪೂಜಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 3:03 IST
Last Updated 4 ಫೆಬ್ರುವರಿ 2026, 3:03 IST
ಬೆಟ್ಟದಪುರದ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ನೆರವೇರಿತು
ಬೆಟ್ಟದಪುರದ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಕ್ತಾದಿಗಳ ನಡುವೆ ವಿಜೃಂಭಣೆಯಿಂದ ನೆರವೇರಿತು   

ಬೆಟ್ಟದಪುರ: ಬೆಟ್ಟದಪುರದಲ್ಲಿ ಭ್ರಮರಾಂಭ ಸಮೇತ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವವು ಮಂಗಳವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವೈಭವದಿಂದ ಜರುಗಿತು.

ಗ್ರಾಮದ ದೇವಾಲಯದಲ್ಲಿ ಮುಂಜಾನೆಯಿಂದಲೇ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳ್ಳಿ ಬಸಪ್ಪ, ವಿಘ್ನೇಶ್ವರ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ರಥ ಬೀದಿಯಲ್ಲಿ ಮೆರವಣಿಗೆ ಮಾಡಿ ರಥದ ಬಳಿಗೆ ಕೊಂಡೊಯ್ಯಲಾಯಿತು.

ಬೆಳಿಗ್ಗೆ 11.30ರಿಂದ 12 ಗಂಟೆಯೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ಮೂರು ಪ್ರತ್ಯೇಕ ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ ಎಂಬ ಹರ್ಷೋದ್ಗಾರಗಳೊಂದಿಗೆ ರಥವನ್ನು ಎಳೆದು ಪುನೀತರಾದರು. ನವ ದಂಪತಿಗಳು, ಭಕ್ತಾದಿಗಳು ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು.

ADVERTISEMENT

ಗಿರಿಜಾ ಕಲ್ಯಾಣೋತ್ಸವ: ರಥೋತ್ಸವದ ಹಿಂದಿನ ದಿನ, ಸೋಮವಾರ ರಾತ್ರಿ ಉತ್ಸವ ಮೂರ್ತಿಗಳನ್ನು ಕುದುರೆಯ ವಾಹನದ ಮೇಲೆ ಪ್ರತಿಷ್ಠಾಪಿಸಿ ಅಶ್ವಾರೋಹಣ ನೆರವೇರಿಸಲಾಯಿತು. ನಂತರ ಗಿರಿಜೆ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಮೂರ್ತಿಗಳಿಗೆ ದೇವಾಲಯದ ಆವರಣದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ಮಾಡಲಾಯಿತು. ಭಕ್ತರು ಗಿರಿಜಾ ಕಲ್ಯಾಣವನ್ನು ಕಣ್ತುಂಬಿಕೊಂಡರು.

ಬೆಟ್ಟದ ಮೇಲಿರುವ ದೇವಾಲಯದಲ್ಲಿಯೂ ಮುಂಜಾನೆ 4ರಿಂದಲೇ ಪೂಜೆಯ ವಿಧಿ ವಿಧಾನಗಳು ಆರಂಭಗೊಂಡವು. ಸಾವಿರಾರು ಭಕ್ತಾದಿಗಳು ಬಿಸಿಲನ್ನು ಲೆಕ್ಕಿಸದೆ 3,600 ಮೆಟ್ಟಿಲುಗಳನ್ನು ಏರಿ ದೇವರ ದರ್ಶನ ಪಡೆದು ಹರಕೆ ಕಾಣಿಕೆಯನ್ನು ಸಮರ್ಪಿಸಿದರು. ಸಂಜೆ 5.00ಕ್ಕೆ ರಥವನ್ನು ಸ್ವಸ್ಥಾನಕ್ಕೆ ತಲುಪಿಸಿದ ನಂತರ ಹಂಸವಾಹನದ ಮೇಲೆ ಮೆರವಣಿಗೆ ಮಾಡಿ ಶಾಂತೋತ್ಸವ ನೆರವೇರಿಸಲಾಯಿತು. ಉತ್ಸವಗಳನ್ನು ಉಪ್ಪಾರ ಸಮುದಾಯದವರು ನಡೆಸಿಕೊಟ್ಟರು.

ಜಾತ್ರಾ ಮೈದಾನದಲ್ಲಿ ಸಿಹಿ ತಿಂಡಿಗಳು ಹಾಗೂ ಆಟೋಟ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಗ್ರಾಮದಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯದ ಬಳಿ ದೇವರ ಮನೆತನದವರು ಹಾಗೂ ಗ್ರಾಮಸ್ಥರು ಶಿವಕುಮಾರ ಸ್ವಾಮಿ ನೇತ್ರತ್ವದಲ್ಲಿ ಎರಡು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಸಲೀಲಾಖ್ಯಾ ಕನ್ನಡ ಮಠದ ಚನ್ನಬಸವದೇಶಿಕೇಂದ್ರಸ್ವಾಮೀಜಿ, ಗಾವಡಗೆರೆ ಗುರುಲಿಂಗಜಂಗಮ ದೇವರ ಮಠದ ನಟರಾಜಸ್ವಾಮೀಜಿ, ಮಾಜಿ ಶಾಸಕ ಕೆ.ಮಹದೇವ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ನ್ಯಾಯಾಧೀಶ ಮಲ್ಲಿಕಾರ್ಜುನ, ಬೆಮ್ಮತಿ ಸುರೇಶ್, ಕೂರಗಲ್ಲು ಶಿವಕುಮಾರಸ್ವಾಮಿ, ತಹಶೀಲ್ದಾರ್ ನಿಸರ್ಗಪ್ರಿಯ, ಕಂದಾಯ ನಿರೀಕ್ಷಕ ಸಂದೀಪ್ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಗ್ರಾಮದ ದೇವಾಲಯದಲ್ಲಿ ಗಿರಿಜಾ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಸೋಮವಾರ ರಾತ್ರಿ ಶಾಸ್ತ್ರೋಕ್ತವಾಗಿ ಕಲ್ಯಾಣೋತ್ಸವ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.