ಬೆಟ್ಟದಪುರ: ‘ಗ್ರಾಮದಲ್ಲಿ ಅ.20 ರಿಂದ ಅ.22 ರವರೆಗೆ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ದೀಪಾವಳಿ ದೀವಟಿಗೆ ಉತ್ಸವವನ್ನು ಸಾಂಪ್ರದಾಯಿಕ ಹಾಗೂ ವೈಭವಯುತವಾಗಿ ನಡೆಸಲಾಗುವುದು’ ಎಂದು ತಹಶೀಲ್ದಾರ್ ನಿಸರ್ಗ ಪ್ರಿಯ ತಿಳಿಸಿದರು.
ದೇವಾಲಯದ ಆವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ‘ಬೆಟ್ಟದ ಮೇಲೆ ವ್ಯಾಪಾರ ಮಾಡುವ ವ್ಯಾಪಾರಸ್ಥರು ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಬಳಿ ಅನುಮತಿ ಪಡೆಯಬೇಕು, ಭಕ್ತಾದಿಗಳು ಬೆಟ್ಟಕ್ಕೆ ಹತ್ತುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರೆ ವಸ್ತುಗಳನ್ನು ಕೊಂಡೊಯ್ಯುತ್ತಾರೆ, ವ್ಯಾಪಾರಸ್ಥರು ಅಲ್ಲಲ್ಲಿ ಕಸದ ಬುಟ್ಟಿಯನ್ನು ಇಟ್ಟು ಕಸದ ನಿರ್ವಹಣೆ ಮಾಡುವುದು ಅವರ ಜವಾಬ್ದಾರಿ’ ಎಂದರು.
‘ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು, ಬೆಟ್ಟದ ತಪ್ಪಲಿನಲ್ಲಿ ಭಕ್ತಾದಿಗಳಿಗೆ ಶೌಚಾಲಯ, ಕುಡಿಯುವ ನೀರು, ಹಾಗೂ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ಬೆಟ್ಟದ ಸುತ್ತ ಮೂರು ಕಡೆ ತಾತ್ಕಾಲಿಕ ಆರೋಗ್ಯ ಚಿಕಿತ್ಸಾಲಯವನ್ನು ತೆರೆಯಬೇಕು. ಅಲ್ಲಲ್ಲಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಬೇಕು, ಬೆಟ್ಟಕ್ಕೆ ಹತ್ತುವ ಮೆಟ್ಟಿಲುಗಳನ್ನು ಅರಣ್ಯ ಇಲಾಖೆಯಿಂದ ಸ್ವಚ್ಛಗೊಳಿಸಬೇಕು’ ಎಂದು ಸೂಚಿಸಿದರು.
ಉಪ್ಪಾರ ಸಮುದಾಯದ ಮುಖಂಡ ಆಂಜನೇಯ ಮಾತನಾಡಿ, ‘ಉತ್ಸವ ಮೂರ್ತಿಗಳನ್ನು ರಾತ್ರಿ ಸಮಯದಲ್ಲಿ ಹೊರುವಾಗ ನಮಗೆ ವಿದ್ಯುತ್ ಸೌಲಭ್ಯ ಹಾಗೂ ಪೊಲೀಸ್ ವ್ಯವಸ್ಥೆ ಮಾಡಿಸಿಕೊಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ‘ಲ್ಯಾಂಪ್ ಮತ್ತು ವಿದ್ಯುತ್ ಸೌಕರ್ಯ ಹಾಗೂ ಪೊಲೀಸರನ್ನು ಉತ್ಸವದ ಜೊತೆ ನಿಯೋಜಿಸಲಾಗುವುದು. ಉತ್ಸವ ಮುಗಿದ ಬಳಿಕ ದೇವಾಲಯದ ಸುತ್ತ ಹಾಗೂ ಬೆಟ್ಟದಲ್ಲಿ ಕಂದಾಯ ಹಾಗೂ ಪಂಚಾಯಿತಿ ಒಳಗೊಂಡಂತೆ ಸ್ವಯಂಸೇವಕರು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳನ್ನು ಬಳಸಿಕೊಂಡು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕು’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪ ತಹಶೀಲ್ದಾರ್ ಶಶಿಧರ್, ಪ್ರಭಾರ ಕಂದಾಯ ನಿರೀಕ್ಷಕ ಪಾಂಡುರಂಗ, ಗ್ರಾಮ ಲೆಕ್ಕಾಧಿಕಾರಿಗಳಾದ ನಿರಂಜನ್, ಅಯ್ಯಪ್ಪ, ಕುಮುದಾ, ಚೈತ್ರಾ, ಗುರುನಾಯಕ್, ಮುಖಂಡರಾದ ಪ್ರಕಾಶ್ ರಾಜೇ ಅರಸ್, ರಾಮೇಗೌಡ, ಶಿವಣ್ಣ, ಆಂಜನೇಯ, ಜಗ್ಗಪ್ಪ, ಮಲ್ಲಯ್ಯ, ರಾಮು, ಮಂಜು, ದೇವರಾಜ್, ಉದಯಕುಮಾರ್, ಮಲ್ಲಿಕಾರ್ಜುನ, ಹರೀಶ್ ರಾಜೇ ಅರಸ್, ವಿಜಯ್ ರಾಜೇ ಅರಸ್, ಕೃಷ್ಣೇಗೌಡ, ಪ್ರಧಾನ ಅರ್ಚಕರಾದ ಸತೀಶ್ ಕಶ್ಯಪ, ಕೃಷ್ಣಮೂರ್ತಿ, ಪಿಡಿಒ ಮಂಜುನಾಥ್, ಚೇತನ್, ಹರೀಶ್, ಕಾರ್ಯದರ್ಶಿ ಪಾಂಡು, ಆರೋಗ್ಯ ನಿರೀಕ್ಷಕ ಕುಮಾರ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.